ಕಾಸರಗೋಡು: ಗಡಿನಾಡ ಕನ್ನಡಿಗರ ಹಿತರಕ್ಷಣೆ ನಿಟ್ಟಿನಲ್ಲಿ ಲೋಕಸೇವಾ ಆಯೋಗದ ಕಾಸರಗೋಡು ಕಚೇರಿಗೆ ಮುತ್ತಿಗೆ ನಡೆಸಿದ ಪ್ರಕರಣದಲ್ಲಿ ಬಿಜೆಪಿ ರಾಜ್ಯದ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಎಲ್ಲರನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ಖುಲಾಸೆಗೊಳಿಸಿದೆ.
ಬಿಜೆಪಿ ಮುಖಂಡರಾದ ವಕೀಲ ಕೆ.ಶ್ರೀಕಾಂತ್, ಎಂ. ಸಂಜೀವ ಶೆಟ್ಟಿ, ಪಿ. ಸುರೇಶ್‍ಕುಮಾರ್ ಶೆಟ್ಟಿ, ವಿಜಯಕುಮಾರ್ ರೈ ಸೇರಿದಂತೆ ಹಲವರು ಖುಲಾಸೆಗೊಂಡವರು. ಆರೋಪ ಸಾಬೀತುಪಡಿಸುವಲ್ಲಿ ಪ್ರೋಸಿಕ್ಯೂಶನ್ ವಿಫಲವಾದ ಹಿನ್ನೆಲೆಯಲ್ಲಿ ಇವರನ್ನು ಕೇಸಿನಿಂದ ಕೈಬಿಡಲಾಗಿದೆ.
ಪಿಎಸ್‍ಸಿ ಪರೀಕ್ಷೆಯಲ್ಲಿ ಮಲಯಾಳ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರಿಗಾಗುತ್ತಿರುವ ಅನ್ಯಾಯ ವಿರೋಧಿಸಿ 2013 ಜೂ. 8ರಂದು ಪಿಎಸ್‍ಸಿ ಕಾಸರಗೋಡು ಕಚೇರಿಗೆ ಬಿಜೆಪಿ ವತಿಯಿಂದ ಮುತ್ತಿಗೆ ಹಾಕಲಾಗಿತ್ತು. ಅಂದು ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ. ಸುರೇಂದ್ರನ್ ಧರಣಿ ಉದ್ಘಾಟಿಸಿ ಕಚೇರಿ ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು. ಭಾಷಾ ಅಲ್ಪಸಂಖ್ಯಾತರಾಗಿರುವ ಗಡಿನಾಡ ಕನ್ನಡಿಗರಿಗೆ ಸಂವಿಧಾನಾತ್ಮಕ ಸವಲತ್ತು ಒದಗಿಸಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದಾಗಿ ಕೆ. ಸುರೇಂದ್ರನ್ ದೂರಿದ್ದು, ಈ ಸಂದರ್ಭ ಸರ್ಕಾರದ ಅದೇಶದ ಪ್ರತಿಗಳನ್ನು ಕಚೇರಿಯೊಳಗೆ ಹರಿದು ಹಾಕಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಂದು ನಗರಠಾಣೆ ಪೊಲೀಸರು ಸಾರ್ವಜನಿಕ ಆಸ್ತಿ ಹಾನಿ, ಪೊಲೀಸರ ಕರ್ತವ್ಯಕ್ಕೆ ತಡೆ ಸೇರಿದಂತೆ ವಿವಿಧ ಕಾಯ್ದೆಗಳನ್ವಯ ಕೇಸು ದಾಖಲಿಸಿಕೊಂಡಿದ್ದರು. ಆರೋಪಿಗಳೆಂದು ಹೆಸರಿಸಲಾದವರ ಪರವಾಗಿ ವಕಿಲ ರವಿಪ್ರಕಾಶ್ ಪೆರ್ಲ ನ್ಯಯಾಲಯದಲ್ಲಿ ಹಾಜರಾಗಿದ್ದರು.
ಕೆಎಸ್‍ಇಬಿ, ಕೆಎಸ್‍ಎಫ್‍ಇ ಸೇರಿದಂತೆ ವಿವಿಧ ಇಲಾಖೆಗಳ ಅಸಿಸ್ಟೆಂಟ್ ಗ್ರೇಡ್-2 ಪರೀಕ್ಷೆಗಾಗಿ ಪಿಎಸ್‍ಸಿ ತೀರ್ಮಾನಿಸಿದ್ದು, ಇದರಲ್ಲಿ ಮಲಯಾಳ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಪಿಎಸ್‍ಸಿ ಕಚೇರಿ ಮುತ್ತಿಗೆ ಪ್ರತಿಭಟನೆ ಅಯೋಜಿಸಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಅಂದು ಮುಂದೂಡಬೇಕಾಗಿ ಬಂದಿತ್ತು.