ಸ್ಟಾಕ್‌ಹೋಮ್ (AFP): ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಸ್ವೀಡನ್‌ಗೆ ಭೇಟಿ ಕೊಟ್ಟಿರುವ ಬೆನ್ನಲ್ಲೇ ಶನಿವಾರ ನಸುಕಿನಲ್ಲಿ ಉಕ್ರೇನ್‌ನ ಪ್ರಮುಖ ನಗರ ಚೆರ್ನಿವ್ ಕೇಂದ್ರ ಭಾಗದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಆರು ವರ್ಷದ ಬಾಲಕಿ ಸೇರಿ 7 ನಾಗರಿಕರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಚೆರ್ನಿವ್ ಸೆಂಟ್ರಲ್ ಸ್ಕ್ವೇರ್‌ನಲ್ಲಿರುವ ರಂಗಮಂದಿರಕ್ಕೆ ಕ್ಷಿಪಣಿ ಅಪ್ಪಳಿಸಿದೆ. ಉಕ್ರೇನ್‌ಗೆ ವಿಶ್ವಸಂಸ್ಥೆಯ ಮಾನವೀಯ ಸಮನ್ವಯಕಾರ ಡಿನಿಸೆ ಬ್ರೌನ್, ಜನರು ಬೆಳಗಿನ ವಾಯು ವಿಹಾರ ನಡೆಸುತ್ತಿದ್ದಾಗ, ಕೆಲವರು ಧಾರ್ಮಿಕ ದಿನ ಆಚರಿಸಲು ಬೆಳಿಗ್ಗೆ ಚರ್ಚೆಗೆ ಭೇಟಿ ಕೊಡಲು ಸೇರಿದ್ದಾಗ ನಗರದ ಮುಖ್ಯ ಚೌಕದ ಮೇಲೆ ದಾಳಿ ನಡೆದಿದೆ. ಇದು ಹೇಯ ಕೃತ್ಯ ಎಂದು ಖಂಡಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಗಡಿಗೆ ಸಮೀಪದ ರೋಸ್ಟೊವ್-ಆನ್-ಡಾನ್ ನಗರದಲ್ಲಿ ತಮ್ಮ ಸೇನೆಯ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ, ಚರ್ಚಿಸಿದರು. ಇದೇ ವೇಳೆ ಉಕ್ರೇನ್‌ನಲ್ಲಿ ರಷ್ಯಾ ಸೇನೆಯ ಕಾರ್ಯಾಚರಣೆಗಳ ಉಸ್ತುವಾರಿ ಕಮಾಂಡರ್ ವ್ಯಾಲೆರಿ ಗೆರಾಸಿಮೊವ್ ಅವರನ್ನೂ ಭೇಟಿಯಾದರು ಎಂದು ಅವರ ಆಡಳಿತ ಕಚೇರಿ ಕ್ರೆಮ್ಲಿನ್ ಹೇಳಿದೆ.