ಪೆರ್ಲ: ಸಮಾಜದ ಅಶಕ್ತ ಜನತೆಗೆ ಸಹಾಯ ಒದಗಿಸುತ್ತಿರುವ ಸಂಘಟನೆ ಅಮೃತದೀಪ ಪೆರ್ಲ ವತಿಯಿಂದ 'ಅಮೃತದೀಪ ಕೆಸರು ಗದ್ದೆ ಉತ್ಸವ-2023' ಕಾರ್ಯಕ್ರಮ ಬಜಕೂಡ್ಲು ಬಯಲಿನ ಅನೋರ್ದಿ ಗದ್ದೆಯಲ್ಲಿ ಭಾನುವಾರ ಅದ್ದೂರಿಯಾಗಿ ನೆರವೇರಿತು. ಕರ್ಕಾಘಟಕ ಮಾಸದ ಬಿರು ಬಿಸಿಲಿನ ನಡುವೆ ಆಗಾಗ ಜಿನುಗುತ್ತಿದ್ದ ಮಳೆಯ ನಡುವ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಕೆಸರುಗದ್ದೆಯಲ್ಲಿ ಮಿಂದೆದ್ದರು. ಗ್ರಾಮೀಣ ಸೊಗಡು ಮೈಗೂಡಿಸಿಕೊಂಡು ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಕೆಸರಿನಲ್ಲಿ ಓಟ, ಹಗ್ಗಜಗ್ಗಾಟ, ಮಡಕೆ ಒಡಯುವುದು, ವಾಲಿಬಾಲ್, ಸಂಗೀತಕುರ್ಚಿ, ಹಾಳೆ ಎಳೆಯುವುದು ಸೇರಿದಂತೆ ನಾನಾ ಸ್ಪರ್ಧೆಗಳು ನಡೆಯಿತು. ಆಟಿ ಕಳಂಜ ಕುಣಿತ, ಕೊಂಬು ಮೇಳ ಕೆಸರುಗದ್ದೆ ಉತ್ಸವಕ್ಕೆ ಮೆರಗು ನೀಡಿತು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ತಾನದ ದೇವಸ್ಥಾನದ ಮುಖ್ಯ ಅರ್ಚಕ ಮಧುಸೂಧನ ಪುಣಿಂಚಿತ್ತಾಯ ಸಮಾರಂಭ ಉದ್ಘಾಟಿಸಿದರು. ಕೆಸರುಗದ್ದೆ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಮುಂದಾಳು, ಪ್ರಖರ ವಾಗ್ಮಿ ಶೋಭಾ ಸುರೇಂದ್ರನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಜನ್ಮಕೊಟ್ಟ ತಾಯಿ ಮತ್ತು ನಮ್ಮನ್ನು ಪೊರೆಯುವ ಪಾವನ ಭೂಮಿಗಿಂತ ಮಿಗಿಲಾದುದು ಈ ಜಗತ್ತಿನಲ್ಲಿ ಬೇರೊಂದಿಲ್ಲ. ಕೆಸರುಗದ್ದೆ ಉತ್ಸವ ಕೃಷಿ ಸಂಸ್ಕøತಿಯ ಪ್ರತೀಕವಾಗಿದೆ. ಕೃಷಿ ಮರೆತರೆ ಜೀವನವಿಲ್ಲ. ಮನೆಯನ್ನು ಪ್ರೀತಿಸುವಂತೆ ಸಮಾಜವನ್ನೂ ಆದರದಿಂದ ಕಾಣುವಂತದಾಗ ಸಾಮರಸ್ಯ ಸಾಧ್ಯ ಎಂದು ತಿಳಿಸಿದರು.
ಕೋಝಿಕ್ಕೋಡ್ ಟ್ರಾಫಿಕ್ ಎಸ್.ಪಿ ಹರೀಶ್ಚಂದ್ರ ನಾಯ್ಕ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಂಗಳೂರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಗೌತಮ್ ಪ್ರಸಾದ್ ಶೆಟ್ಟಿ ಎಣ್ಮಕಜೆ, ನಿವೃತ್ತ ಯೋಧ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಂಗ ಕಲಾವಿದೆ ಸೌಮ್ಯಾ ಪಾಣಾಜೆ, ಎಣ್ಮಕಜೆ ಗ್ರಾಪಂ ಸದಸ್ಯೆ ಉಷಾಗಣೇಶ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಕೃಷಿಕ ಹಮೀದ್ ನಡುಬೈಲ್, ಅಮೃತದೀಪ ಸಂಚಾಲಕ ಉದಯ ಚೆಟ್ಯಾರ್ ಬಜಕೂಡ್ಲು, ಸದಾಶಿವ ಭಟ್ ಹರಿನಿಲಯ, ಆಕಾಶವಣಿ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಸಿಬಿಐ ಬೆಂಗಳೂರಿನ ಹಿರಿಯ ಪಬ್ಲಿಕ್ ಪ್ರೋಸಿಕ್ಯೂಟರ್ ಶಿವಾನಂದ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ಶೋಭಾಸುರೇಂದ್ರನ್ ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಅಮೃತದೀಪ ಆಶ್ರಯ ಯೋಜನೆಯ ಸಾಮಾಜಿಕ ಬದ್ಧತೆಯನ್ವಯ ಎಣ್ಮಕಜೆ ಪಂಚಾಯಿತಿಯ ಕಜಂಪಾಡಿಯಲ್ಲಿ ಜಯಮ್ಮ ಎಂಬವರಿಗೆ ನಿರ್ಮಿಸಿಕೊಟ್ಟಿರುವ ನೂತನ ಮನೆಯ ಕೀಲಿಕೈಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ರೂಪವಾಣಿ ಆರ್. ಭಟ್ ಅವರಿಗೆ ಹಸ್ತಾಂತರಿಸಲಾಯಿತು. ವಿದ್ಯಾನಿಧಿ ಸಮರ್ಪಣೆಯನ್ವಯ ವಿದ್ಯಾರ್ಥಿನಿ ಪ್ರೇಕ್ಷಾ ಅವರಿಗೆ ಧನಸಹಾಯ ವಿತರಣೆ ನಡೆಯಿತು. ಪುಷ್ಪರಾಜ ಶೆಟ್ಟಿ ಸವಾಗತಿಸಿದರು. ಉದಯ ಕುಮಾರ್ ಸವರ್ಗ ಕಾರ್ಯಕ್ರಮ ನಿರೂಪಿಸಿದರು. ಉದಯ ಶುಭಂ ವಂದಿಸಿದರು.