ಮಾಸ್ಕೊ: ಹಸಿ ತರಕಾರಿ, ಹಣ್ಣುಗಳನ್ನು ತಿಂದು ಬದುಕುತ್ತಿದ್ದ ರಷ್ಯಾದ ಯುವತಿಯೊಬ್ಬಳು ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಸಂಪೂರ್ಣ ಸಸ್ಯಾಹಾರಿ ಡಯೆಟ್ ಮಾಡುತ್ತಿದ್ದ ಝನ್ನಾ ಸ್ಯಾಮ್ಸೊನೋವಾ (39) ಮೃತ ಯುವತಿ. ಈಕೆ ದಶಕಗಳಿಂದ ಹಸಿಯಾದ ತರಕಾರಿ, ಹಣ್ಣುಗಳನ್ನು ತಿಂದು ಬದುಕುತ್ತಿದ್ದಳು, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಡಯೆಟ್ ಟಿಪ್ಸ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದಿದ್ದಳು.
'ಕೆಲವು ತಿಂಗಳ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡ ವೇಳೆ ಸ್ಯಾಮ್ಸೊನೋವಾ ಅತೀವ ಸುಸ್ತು, ಕಾಲು ನೋವು ಅನುಭವಿಸುತ್ತಿದ್ದಳು, ವೈದ್ಯರ ಬಳಿ ಚಿಕಿತ್ಸೆ ಪಡೆಯುವ ಬಗ್ಗೆ ಹೇಳಿದಾಗ ಮನೆಗೆ ವಾಪಸ್ಸಾಗಿದ್ದಳು' ಎಂದು ಆಕೆಯ ಸ್ನೇಹಿತರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಯಾಮ್ಸೊನೋವಾ ಕಾಲರಾದಂತಹಸೋಂಕಿನಿಂದ ಮೃತಪಟ್ಟಿದ್ದಾಳೆ ಎಂದು ಆಕೆಯ ತಾಯಿ ಹೇಳಿದ್ದಾರೆ. ಆದರೆ ಸಾವಿಗೆ ನಿಖರ ಕಾರಣವೇನೆಂದು ಬಹಿರಂಗಪಡಿಸಿಲ್ಲ.
ಕಳೆದ ಏಳು ವರ್ಷಗಳಿಂದ ಕೇವಲ ಸಿಹಿ ಹಲಸು, ಸೂರ್ಯಕಾಂತಿ ಬೀಜದ ಸ್ಮೂಥಿ, ಹಣ್ಣುಗಳ ಜ್ಯೂಸ್, ಮುಖ್ಯವಾಗಿ ವಿಶ್ವದ ದುರ್ಗಂಧದ ಹಣ್ಣು ಎನಿಸಿಕೊಂಡಿರುವ ದುರಿಯನ್ ಹಣ್ಣು ಸೇರಿ ಕೆಲವು ಆಯ್ದ ತರಕಾರಿ, ಹಣ್ಣುಗಳನ್ನು ಮಾತ್ರ ಸ್ಯಾಮ್ಸೊನೋವಾ ಸೇವಿಸುತ್ತಿದ್ದಳು ಎನ್ನುತ್ತಾರೆ ಆಕೆಯ ಸ್ನೇಹಿತರು.
ತನ್ನ ಆಹಾರ ಶೈಲಿಯ ಬಗ್ಗೆ ಈ ಹಿಂದೆ ಸ್ಯಾಮ್ಸೊನೋವಾ 'ಪ್ರತಿದಿನ ನನ್ನ ದೇಹ ಮತ್ತು ಮನಸ್ಸಿನಲ್ಲಾಗುತ್ತಿರುವ ಬದಲಾವಣೆಯನ್ನು ಕಾಣುತ್ತಿದ್ದೇನೆ, ನನ್ನ ಹೊಸ ರೀತಿಯನ್ನು ಪ್ರೀತಿಸುತ್ತೇನೆ ಅಲ್ಲದೆ ಈಗ ಅಳವಡಿಸಿಕೊಂಡ ವಿಧಾನವನ್ನು ಬದಲಿಸುವುದಿಲ್ಲ' ಎಂದು ಹೇಳಿಕೊಂಡಿದ್ದಳು.