ನವದೆಹಲಿ: ಏಷ್ಯಾದ ಶ್ರೀಮಂತ ವ್ಯಕ್ತಿ ಹಾಗೂ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ 46ನೇ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಹೊರಬಿದ್ದಿದೆ.
ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ ಸದಸ್ಯ ಸ್ಥಾನಕ್ಕೆ ನೀತಾ ಅಂಬಾನಿ ರಾಜೀನಾಮೆ ನೀಡಿದ್ದಾರೆ.
ನೀತಾ ಅಂಬಾನಿ ರಾಜೀನಾಮೆಯನ್ನು ರಿಲಯನ್ಸ್ ಇಂಡಸ್ಟ್ರೀ ಸ್ವೀಕರಿಸಿದೆ. ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ ಸಮಿತಿಗೆ ಮಾತ್ರ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿ ನೀತಾ ಅಂಬಾನಿ ಮುಂದುವರಿಯಲಿದ್ದಾರೆ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ.
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪೆನಿಯ ಕಾರ್ಯ ನಿರ್ವಾಹಕಯೇತರ (ನಾನ್ ಎಕ್ಸಿಕ್ಯೂಟಿವ್) ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ನಡೆದ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ.
ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿರುವ ಮಂಡಳಿ, ಈ ಮೂವರ ನೇಮಕಾತಿಗಾಗಿ ಅನುಮೋದನೆ ನೀಡಲು ಶಿಫಾರಸು ಮುಂದಿಟ್ಟಿದೆ. ಶೇರ್ ಹೋಲ್ಡರ್‌ಗಳ ಒಪ್ಪಿಗೆ ಬಳಿಕ ಅವರು ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ನೇಮಕಾತಿಯು ಜಾರಿಗೆ ಬರಲಿದೆ.
ರಿಲಯನ್ಸ್ ಫೌಂಡೇಶನ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹಾಗೂ ಭಾರತದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ನೀತಾ ಅಂಬಾನಿ ರಿಲಯನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್‌ಗೆ ರಾಜೀನಾಮೆ ನೀಡಿದ್ದಾರೆ. ನೀತಾ ಅಂಬಾನಿ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ಮುಕೇಶ್ ಹೇಳಿದ್ದಾರೆ.