ನವದೆಹಲಿ: ಭಾರತದ ಚಂದ್ರಯಾನ 3 ಯೋಜನೆಯ ಯಶಸ್ಸನ್ನು ಕಂಡು ಇಡೀ ಜಗತ್ತೇ ನಿಬ್ಬೆರಗಾಗಿ ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಬ್ರಿಟನ್ನಿನ ಕೆಲವರು ಅಸೂಯೆಯನ್ನು ಹೊರಗಾಕಿದ್ದಾರೆ. ಯುನೈಟೆಡ್ ಕಿಂಗ್ಡಮ್, ಭಾರತಕ್ಕೆ ಕಳುಹಿಸುವ ನೆರವಿನ ಕುರಿತು ಟಿವಿ ಆಯಂಕರ್ ಮಾಡಿರುವ ಟ್ವೀಟ್, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಎಕ್ಷ್ ಬಯೋ ಪ್ರಕಾರ ಟಿವಿ ಆಯಂಕರ್ ಮತ್ತು ರಾಜಕೀಯ ಪ್ರಸಾರಕ ಎಂದು ಹೇಳಿಕೊಂಡಿರುವ ಸೋಫಿಯಾ ಕೊರ್ಕೊರಾನ್, ಸುಧಾರಿತ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಮತ್ತು ಚಂದ್ರನ ಮೇಲೆಯೇ ರಾಕೆಟ್ ಅನ್ನು ಲ್ಯಾಂಡ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಭಾರತದಂತಹ ದೇಶಗಳಿಗೆ ಯುಕೆ ನೆರವನ್ನು ನೀಡಬಾರದು. ನಮ್ಮ ಹಣವನ್ನು ಮರಳಿ ಪಡೆಯುವ ಸಮಯವಿದು ಎಂದು ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ. ಆದ್ದರಿಂದ 33.4 ಮಿಲಿಯನ್ ಪೌಂಡ್ ಹಾಗೂ 2024-25ನೇ ಸಾಲಿನಲ್ಲಿ 57 ಮಿಲಿಯನ್ ಪೌಂಡ್ಗೆ ಏರಿಸಬೇಕು ಅಂದುಕೊಂಡಿರುವ ವಿದೇಶಿ ನೆರವನ್ನು ನಾವೇಕೆ ಅವರಿಗೆ ನೀಡಬೇಕು ಎಂದು ಕೊರ್ಕೊರಾನ್ ಎಕ್ಷ್ನಲ್ಲಿ ಬುಧವಾರ ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲದೆ, ಪ್ಯಾಟ್ರಿಕ್ ಕ್ರಿಸ್ಟ್ಸ್ ಎಂಬ ಮತ್ತೊಬ್ಬ ಬ್ರಿಟನ್ ಆಯಂಕರ್ ಕೂಡ ನಾಲಿಗೆ ಹರಿಬಿಟ್ಟಿದ್ದಾರೆ. ಚಂದ್ರಯಾನ ಯಶಸ್ಸಿಗಾಗಿ ಭಾರತವನ್ನು ಅಭಿನಂದಿಸುತ್ತಾನೆ. ಚಂದ್ರನ ಡಾರ್ಕ್ ಸೈಡ್‌ನಲ್ಲಿ ರಾಕೆಟ್ ಅನ್ನು ಹಾರಿಸಲು ನೀವು ಶಕ್ತರಾಗಿದ್ದರೆ, ನೀವು ವಿದೇಶಿ ಸಹಾಯಕ್ಕಾಗಿ ನಮ್ಮ ಬಳಿಗೆ ಬರಬಾರದು. ನಮ್ಮ 2.3 ಬಿಲಿಯನ್ ಪೌಂಡರ್ ವಿದೇಶಿ ನೆರವನ್ನು ಹಿಂತಿರುಗಿಸಿ ಎಂದಿದ್ದಾರೆ.
ಕೊರ್ಕೊರಾನ್ ಹಾಗೂ ಪ್ಯಾಟ್ರಿಕ್ ಮಾತಿಗೆ ಬ್ರಿಟನ್‌ನ ಅನೇಕರು ಕೂಡ ಧ್ವನಿಗೂಡಿಸಿದ್ದಾರೆ. ಸರ್ಕಾರ ವಿದೇಶಿ ನೆರವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದದಾರೆ. ಇತ್ತ ಭಾರತೀಯರು ಕೊರ್ಕೊರಾನ್ ಮತ್ತು ಬ್ರಿಟನ್ ಪ್ರಜೆಗಳ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬ್ರಿಟಿಷರ ಆಡಳಿತದಲ್ಲಿ ಭಾರತದಿಂದ ಲೂಟಿ ಮಾಡಿದ ಹಣವನ್ನು ಮರಳಿಸಿ ಎಂದು ಧ್ವನಿ ಎತ್ತಿದ್ದಾರೆ. 45 ಟ್ರಿಲಿಯನ್ ಎಂಬ ಪದ ಎಕ್ಷ್ನಲ್ಲಿ ಟ್ರೆಂಡ್ ಕೂಡ ಆಗಿದೆ.
ಭಾರತದಿಂದ ಯುಕೆ ಲೂಟಿ ಮಾಡಿದ 45 ಟ್ರಿಲಿಯನ್ ಡಾಲರ್ ಹಣವನ್ನು ಮರಳಿಸಬೇಕು ಮತ್ತು ವಿದೇಶಿ ನೆರವಿನ ಹೆಸರಿನಲ್ಲಿ ಎನ್ಜಿಒಗಳಿಗೆ ಫಂಡಿಂಗ್ ಮಾಡುವುದನ್ನು ಬ್ರಿಟನ್ ನಿಲ್ಲಿಸಬೇಕೆಂದು ನೆಟ್ಟಿಗರೊಬ್ಬರು ಆಗ್ರಹಿಸಿದ್ದಾರೆ. ಮತ್ತೊಬ್ಬ ನೆಟ್ಟಿಗ, ಕೊಹಿನೂರು ವಜ್ರವನ್ನು ಮರಳಿಸುವಂತೆ ಒತ್ತಾಯಿಸಿದ್ದಾರೆ.
ಬ್ರಿಟನ್ ತನ್ನ ಆಡಳಿತದ ಅವಧಿಯಲ್ಲಿ ಭಾರತದಿಂದ 45 ಟ್ರಿಲಿಯನ್ ಡಾಲರ್ (ಇಂದಿನ ಮೌಲ್ಯದ ಪ್ರಕಾರ) ಗಿಂತ ಹೆಚ್ಚಿನ ಹಣವನ್ನು ಲೂಟಿ ಮಾಡಿದೆ ಎಂದು ಅಂದಾಜಿಸಲಾಗಿದೆ. ಬೇಕಾದರೆ ಬ್ರಿಟನ್ 2.3 ಶತಕೋಟಿ ಡಾಲರ್ ಹೆಚ್ಚಿನ ಬಡ್ಡಿಯನ್ನು ಇಟ್ಟುಕೊಳ್ಳಬಹುದು ಮತ್ತು ಉಳಿದ ಹಣವನ್ನು ಭಾರತಕ್ಕೆ ಕಳುಹಿಸಬಹುದು ಎಂದು ಮತ್ತೊರ್ವ ಟ್ವೀಟ್ ಮಾಡಿದ್ದಾರೆ.
ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿದ ಅರ್ಥಶಾಸ್ತ್ರಜ್ಞ ಉತ್ಸಾ ಪಟ್ನಾಯಕ್ ಅವರ ಸಂಶೋಧನೆ ಪ್ರಕಾರ 45 ಟ್ರಿಲಿಯನ್ ಡಾಲರ್ ಅನ್ನು ಉಲ್ಲೇಖಿಸಲಾಗಿದೆ. 1765 ರಿಂದ 1938ರ ಅವಧಿಯಲ್ಲಿ ಬ್ರಿಟನ್ ಸುಮಾರು 45 ಟ್ರಿಲಿಯನ್ ಡಾಲರ್ ಮೊತ್ತವನ್ನು ಭಾರತದಿಂದ ಲೂಟಿ ಮಾಡಿದೆ ಎಂದು ಪಟ್ನಾಯಕ್ ಅವರು ಸುಮಾರು ಎರಡು ಶತಮಾನಗಳ ತೆರಿಗೆ ಮತ್ತು ವ್ಯಾಪಾರದ ಡೇಟಾವನ್ನು ಚಿತ್ರಿಸಿದ್ದಾರೆ ಎಂದು ಅಲ್ ಜಜೀರಾದಲ್ಲಿ ವರದಿಯಾಗಿದೆ. ಅಂದಹಾಗೆ ಲೂಟಿ ಮಾಡಿದ ಮೊತ್ತವು ಇಂದಿನ ಬ್ರಿಟನ್‌ನ ಜಿಡಿಪಿಗಿಂತ ಸುಮಾರು 15 ಪಟ್ಟು ಹೆಚ್ಚಿದೆ.
2016 ಮತ್ತು 2021 ರ ನಡುವೆ ಯುಕೆ ಸರ್ಕಾರವು ಭಾರತಕ್ಕೆ 2.3 ಬಿಲಿಯನ್ ಪೌಂಡ್ ನೆರವು ನೀಡಿದೆ ಎಂದು 2023ರ ಮಾರ್ಚ್ನಲ್ಲಿ ಪ್ರಕಟವಾದ ದಿ ಗಾರ್ಡಿಯನ್ ವರದಿಯಲ್ಲಿ ಉಲ್ಲೇಖವಾಗಿದೆ.