ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಹೆಚ್ಚು ಸುದ್ದಿಯಲ್ಲಿದ್ದು, ಅವರು ನಟಿಸಿರುವ ವೆಬ್ ಸೀರೀಸ್ ಹಾಗೂ ಚಿತ್ರಗಳು ಅಪಾರ ಯಶಸ್ಸನ್ನು ಗಳಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ.
ಅಭಿಮಾನಿಗಳ ವಿಚಾರಕ್ಕೆ ಬರುವುದಾದರೆ ತಮ್ಮ ನೆಚ್ಚಿನ ನಟ/ನಟಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಕೇರಳದ ಕೊಲ್ಲಂನಲ್ಲಿ ಸೋಮವಾರ ನಡೆದ ಘಟನೆ ಮತ್ತೊಂದು ಸಾಕ್ಷಿಯಾಗಿದೆ.
ಸೋಮವಾರ ಕೇರಳದ ಕೊಲ್ಲಂನಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ಆಗಮಿಸಿದ್ದ ನಟಿ ತಮನ್ನಾರನ್ನೂ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಲ್ಲಿದ್ದ ಅಭಿಮಾನಿಯೋರ್ವ ಬಿಗಿ ಭದ್ರತೆಯನ್ನೂ ಲೆಕ್ಕಿಸದೆ ಬ್ಯಾರಿಕೇಟ್ಗಳನ್ನೂ ಹಾರಿ ನಟಿಯ ಜೊತೆ ಮಾತನಾಡಲು ಮುಂದಾಗಿದ್ದಾನೆ.
ಆತನನ್ನೂ ಕಂಡು ಒಂದು ಕ್ಷಣಕ್ಕೆ ನಟಿ ಗಾಬರಿಯಾಗಿದ್ದಾರೆ. ಬಳಿಕ ಅವರ ಕೈಹಿಡಿಯಲು ಆತ ಮುಂದಾಗಿದ್ದು, ಇದಕ್ಕೆ ಆಸ್ಪದ ಕೊಡದ ನಟಿ ಬಳಿಕ ಆತನ ಜೊತೆ ಫೋಟೋಗೆ ಪೋಸ್ ನೀಡಿ ಮುಂದಕ್ಕೆ ತೆರಳಿದ್ದಾರೆ. ಇದಾದ ಬಳಿಕ ಕಾರ್ಯಕ್ರಮದ ಭದ್ರತೆಗಾಗಿ ನೇಮಿಸಿದ್ದ ಬೌನ್ಸರ್ ಹಾಗೂ ಅಭಿಮಾನಿಗಳ ನಡುವೆ ವಾಗ್ವಾದವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.