ಜೋಹಾನಸ್‌ಬರ್ಗ್ : 'ಸದಸ್ಯ ರಾಷ್ಟ್ರಗಳ ಒಮ್ಮತದ ಮೇರೆಗೆ ಬ್ರಿಕ್ಸ್ ವಿಸ್ತರಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇರಾನ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ 23 ದೇಶಗಳು ಬ್ರಿಕ್ಸ್ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಮೋದಿ ಅವರು ಸದಸ್ಯತ್ವ ಸಂಖ್ಯೆ ವಿಸ್ತರಿಸಲು ಇಂಗಿತ ವ್ಯಕ್ತಪಡಿಸಿ ನೀಡಿರುವ ಹೇಳಿಕೆಯು ಮಹತ್ವ ಪಡೆದಿದೆ.
ಜೋಹಾನಸ್‌ಬರ್ಗ್‌ನಲ್ಲಿ ಬುಧವಾರ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, 'ಸದ್ಯ ಭಾರತ ಸೇರಿದಂತೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಈ ವೇದಿಕೆಯಡಿ ಒಗ್ಗೂಡಿವೆ. ಭವಿಷ್ಯದಲ್ಲಿ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚಿಸಲು ಅಗತ್ಯ ಬೆಂಬಲ ನೀಡಲು ಬದ್ಧ' ಎಂದು ಘೋಷಿಸಿದರು.
ಜೊತೆಗೆ, ಬ್ರಿಕ್ಸ್ ಬೆಂಬಲದೊಂದಿಗೆ 'ಜಿ20' ಆಫ್ರಿಕನ್ ಒಕ್ಕೂಟದ ಸೇರ್ಪಡೆಗೂ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ನಾಯಕರ ಚರ್ಚೆ: ಜಾಗತಿಕ ಅಭಿವೃದ್ಧಿ ಸೇರಿದಂತೆ ವಿಶ್ವದ ಸವಾಲುಗಳಿಗೆ ಪರಿಹಾರ ಹುಡುಕಲು ಬ್ರಿಕ್ಸ್ ಅನ್ನು ವೇದಿಕೆಯಾಗಿ ಬಳಸಿಕೊಳ್ಳುವ ಬಗ್ಗೆ ಇದಕ್ಕೂ ಮೊದಲು ನಾಯಕರು ಚರ್ಚಿಸಿದರು.
ಕೋವಿಡ್ ಪರಿಣಾಮ ಕಳೆದ ಮೂರು ವರ್ಷಗಳಿಂದ ವರ್ಚುವಲ್ ಆಗಿ ಸಭೆ ನಡೆಸಲಾಗಿತ್ತು. ಈ ಐದು ರಾಷ್ಟ್ರಗಳಲ್ಲಿ ಜಗತ್ತಿನ ಶೇ 41ರಷ್ಟು ಜನಸಂಖ್ಯೆ ಇದೆ. ಶೇ 24ರಷ್ಟು ಜಾಗತಿಕ ಜಿಡಿಪಿ ಹಾಗೂ ಶೇ 16ರಷ್ಟು ಜಾಗತಿಕ ವ್ಯಾಪಾರ ಈ ರಾಷ್ಟ್ರಗಳಲ್ಲಿ ವಿಸ್ತರಿಸಿದೆ.
ದ್ವಿಪಕ್ಷೀಯ ಚರ್ಚೆ: ಪ್ರಧಾನಿ ಮೋದಿ ಹಾಗೂ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಉಭಯ ದೇಶಗಳ ದ್ವಿಪಕ್ಷೀಯ ಒಪ್ಪಂದ ಕುರಿತು ಪರಾಮರ್ಶೆ ನಡೆಸಿದರು.
'ಜಾಗತಿಕ ದಕ್ಷಿಣ' ರಾಷ್ಟ್ರಗಳ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಜಂಟಿಯಾಗಿ ಕೆಲಸ ಮಾಡುವ ಕುರಿತು ಪರಸ್ಪರ ಚರ್ಚಿಸಿದರು.
ರಕ್ಷಣೆ, ಕೃಷಿ, ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಎರಡೂ ದೇಶಗಳ ಪ್ರಜೆಗಳ ನಡುವಿನ ಬಾಂಧವ್ಯ ವೃದ್ಧಿ ಸೇರಿದಂತೆ ದ್ವಿಪಕ್ಷೀಯ ಒಪ್ಪಂದದ ಬೆಳವಣಿಗೆ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಪ್ರಾದೇಶಿಕ ಹಾಗೂ ಬಹುಪಕ್ಷೀಯ ವಿಷಯಗಳಿಗೆ ಸಂಬಂಧಿಸಿದ ಸಹಕಾರ ಹಾಗೂ ನೆರವು ಕಲ್ಪಿಸುವ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ.
ಮಾತುಕತೆ ವೇಳೆ ಅಧ್ಯಕ್ಷ ರಾಮಫೋಸಾ ಅವರು ಈ ಬಾರಿ ಭಾರತವು ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಭೆಯ ಯಶಸ್ಸಿಗೆ ಅಗತ್ಯವಿರುವ ಎಲ್ಲಾ ಸಹಾಯ ನೀಡಲು ದಕ್ಷಿಣ ಆಫ್ರಿಕಾ ಒಕ್ಕೂಟವು ಬದ್ಧವಾಗಿರುವ ಬಗ್ಗೆ ಭರವಸೆ ನೀಡಿದ್ದಾರೆ. ನವದೆಹಲಿಯಲ್ಲಿ ಸೆಪ್ಟೆಂಬರ್ 8ರಿಂದ 10ರ ವರೆಗೆ ನಡೆಯಲಿರುವ ಜಿ 20 ಸಭೆಯಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿರುವುದಾಗಿ ತಿಳಿಸಿದ್ದಾರೆ.
ಏನಿದು ಜಾಗತಿಕ ದಕ್ಷಿಣ?: ದೇಶಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯತ್ಯಾಸಗಳನ್ನು ಉಲ್ಲೇಖಿಸಿ ಜಾಗತಿಕ ಉತ್ತರ ಮತ್ತು ದಕ್ಷಿಣ ಎಂದು ಕರೆಯಲಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳು (ಉತ್ತರ) ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ (ದಕ್ಷಿಣ) ನಡುವಿನ ವ್ಯತ್ಯಾಸದ ಮೇಲೆ ಇದು ಬೆಳಕು ಚೆಲ್ಲುತ್ತದೆ.
ಭೌಗೋಳಿಕತೆ ಮತ್ತು ಜನಸಂಖ್ಯೆ ಆಧರಿಸಿ ಈ ಉತ್ತರ ಮತ್ತು ದಕ್ಷಿಣ ಪದಗಳು ಜನ್ಮ ತಳೆದಿವೆ. ಇದರ ನಿಜವಾದ ಮಾನದಂಡವು ಆರ್ಥಿಕತೆಯನ್ನು ಆಧರಿಸಿದೆ. ಬ್ರೆಜಿಲ್, ಭಾರತ, ಇಂಡೋನೇಷ್ಯಾ, ಚೀನಾ, ನೈಜೀರಿಯಾ ಹಾಗೂ ಮೆಕ್ಸಿಕೊ ಜಾಗತಿಕ ದಕ್ಷಿಣದ ಭಾಗದಲ್ಲಿವೆ.
ಮೋದಿ ನಡೆಗೆ ಮೆಚ್ಚುಗೆ
ಬ್ರಿಕ್ಸ್ ವೇದಿಕೆಯ ಮೇಲೆ ಪ್ರಧಾನಿ ಮೋದಿ ಅವರು ಭಾರತದ ರಾಷ್ಟ್ರಧ್ವಜಕ್ಕೆ ತೋರಿದ ಗೌರವದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವೇದಿಕೆ ಮೇಲೆ ಬ್ರಿಕ್ಸ್ ನಾಯಕರ ಫೋಟೊ ಸೆಷನ್ ಇತ್ತು. ಈ ವೇಳೆ ಮೊದಲಿಗೆ ವೇದಿಕೆ ಏರಿದ ಮೋದಿ ಅವರಿಗೆ ತ್ರಿವರ್ಣ ಧ್ವಜದ ಫೋಟೊ ಬಿದ್ದಿರುವುದು ಕಂಡುಬಂದಿತು. ತಕ್ಷಣವೇ ಅದನ್ನು ತೆಗೆದುಕೊಂಡ ಅವರು ಜೇಬಿಗೆ ಇಟ್ಟುಕೊಂಡರು. ಪಕ್ಕದಲ್ಲಿಯೇ ಇದ್ದ ರಾಮಫೋಸಾ ಅವರು ಕೆಳಗೆ ಬಿದ್ದಿದ್ದ ಧ್ವಜವನ್ನು ಎತ್ತಿಕೊಂಡರು. ಬಳಿಕ ಅಧಿಕಾರಿಗೆ ಅದನ್ನು ನೀಡಿದರು.