ಬೆಂಗಳೂರು:ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಇತ್ತೀಚೆಗಷ್ಟೇ ಪಿಎಚ್‌ಡಿ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದರು. ಕೊನೆಗೂ ಅದನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಯನ್ನು ಅವರು ಬರೆದದ್ದು ಅದರಲ್ಲಿ ಪಾಸ್ ಕೂಡ ಆಗಿದ್ದಾರೆ
ಕನ್ನಡ ವಿಶ್ವವಿದ್ಯಾಲಯದ ಪಿಎಚ್‌ಡಿ ಸಾಮಾನ್ಯ ಪ್ರವೇಶ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಸೇರಿ 295 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿವಿಯಲ್ಲಿ ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ನಿಕಾಯದ ವಿವಿಧ ವಿಭಾಗಗಳಡಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ.
ಮೂರು ನಿಕಾಯಗಳಡಿ ಸಂಶೋಧನೆಗೆ ಆಸಕ್ತಿ ತೋರಿ 981 ಮಂದಿ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಆ ಪೈಕಿ ಒಟ್ಟು 295 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕನ್ನಡ ವಿವಿ ಮಾಹಿತಿ ನೀಡಿದೆ.
ಕನ್ನಡ ವಿವಿ ವ್ಯಾಪ್ತಿಯ ಅಧ್ಯಯನ ವಿಭಾಗ, ಮಾನ್ಯತ ಕೇಂದ್ರ, ಹಾಗೂ ವಿಸ್ತರಣಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಥಾನ ಮತ್ತು ಮಾರ್ಗದರ್ಶಕರ ಸಂಖ್ಯೆಗೆ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುತ್ತದೆ.
ನಟಿ ಪವಿತ್ರಾ ಲೋಕೇಶ್ ಅವರು ಭಾಷಾ ನಿಕಾಯದಡಿ ಬೆಳಗಾವಿ ವಿಸ್ತರಣಾ ಕೇಂದ್ರದಲ್ಲಿ ಸಂಶೋಧನೆ ಕೈಗೊಳ್ಳಲು ಪರೀಕ್ಷೆ ಬರೆದಿದ್ದರು. ಕಳೆದ ಮೇ 30 ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು.