ವಿಶ್ವಸಂಸ್ಥೆ: ಸುಸ್ಥಿರ ಜೀವನ ಶೈಲಿ ಉತ್ತೇಜಿಸುವ ಗುರಿ ಹೊಂದಿರುವ 'ಮಿಷನ್ ಲೈಫ್' (ಪರಿಸರಕ್ಕಾಗಿ ಜೀವನಶೈಲಿ) ಕೇಂದ್ರಿತ ವಿಶೇಷ ವಸ್ತು ಪ್ರದರ್ಶನವನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತ ಆಯೋಜಿಸಿತ್ತು.
ವಿಶ್ವಸಂಸ್ಥೆ: ಸುಸ್ಥಿರ ಜೀವನ ಶೈಲಿ ಉತ್ತೇಜಿಸುವ ಗುರಿ ಹೊಂದಿರುವ 'ಮಿಷನ್ ಲೈಫ್' (ಪರಿಸರಕ್ಕಾಗಿ ಜೀವನಶೈಲಿ) ಕೇಂದ್ರಿತ ವಿಶೇಷ ವಸ್ತು ಪ್ರದರ್ಶನವನ್ನು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತ ಆಯೋಜಿಸಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಕಳೆದ ಅಕ್ಟೋಬರ್‌ನಲ್ಲಿ 'ಮಿಷನ್ ಲೈಫ್' ಜಾಗತಿಕ ಆಂದೋಲನಕ್ಕೆ ಚಾಲನೆ ನೀಡಿದ್ದರು.
ವಿಶ್ವಸಂಸ್ಥೆ ರಾಯಭಾರಿಯಾಗಿರುವ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಮಾತನಾಡಿ, 'ಮಿಷನ್ ಲೈಫ್ ಕೇವಲ ಸರ್ಕಾರಿ ಕಾರ್ಯಕ್ರಮವಲ್ಲ. ಇದು ಪ್ರತಿ ವ್ಯಕ್ತಿಯಿಂದ ಪ್ರಾರಂಭವಾಗುವ ಸಾಮೂಹಿಕ ಬದ್ಧತೆ. ನಮ್ಮ ದೈನಂದಿನ ಜೀವನದಲ್ಲಿನ ಸಣ್ಣ ಬದಲಾವಣೆಗಳು ನಮ್ಮ ಪರಿಸರದ ಮೇಲೆ ಒಂದು ಅನನ್ಯ ಪರಿಣಾಮ ಬೀರುತ್ತದೆ. ಪರಿಸರ ಸ್ನೇಹಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ, ನಮ್ಮ ಗ್ರಹಕ್ಕೆ ಹೊಸ ಭವಿಷ್ಯ ರೂಪಿಸುತ್ತಿದ್ದೇವೆ' ಎಂದು ಅವರು ಹೇಳಿದರು.
'ಮುಂದಿನ ಪೀಳಿಗೆಗೆ ನಮ್ಮ ಪರಿಸರ ವ್ಯವಸ್ಥೆಯ ಚೈತನ್ಯವನ್ನು ಖಾತ್ರಿಪಡಿಸಬೇಕು. ಅದಕ್ಕಾಗಿ ಅನಗತ್ಯ ಅಭ್ಯಾಸಗಳನ್ನು ಕೈಬಿಟ್ಟು, ವಿವೇಕಯುತ ಆಯ್ಕೆಗಳನ್ನು ಮಾಡಿಕೊಳ್ಳಬೇಕಿದೆ. ನಮ್ಮ ಮಕ್ಕಳು ಆನುವಂಶಿಕವಾಗಿ ಹೆಮ್ಮೆಪಡುವ ಜವಾಬ್ದಾರಿಯುತ ಉಸ್ತುವಾರಿಯ ಪರಂಪರೆ ನಿರ್ಮಿಸೋಣ. ಮಿಷನ್ ಲೈಫ್ ಅನ್ನು ಸುಸ್ಥಿರ ನಾಳೆಗಾಗಿ, ಭರವಸೆಯ ದಾರಿದೀಪವಾಗಿ ಮಾಡೋಣ' ಎಂದು ರುಚಿರಾ ಕರೆ ನೀಡಿದರು.
ಮಿಷನ್ ಲೈಫ್ ಪ್ರದರ್ಶನದಲ್ಲಿ, ಇಂಧನ ಉಳಿಸಿ, ನೀರಿನ ಸಂರಕ್ಷಣೆ, ಸುಸ್ಥಿರ ಆಹಾರ, ಆರೋಗ್ಯಕರ ಜೀವನಶೈಲಿ ಅಳವಡಿಕೆ, ಏಕ ಬಳಕೆಯ ಪ್ಲಾಸ್ಟಿಕ್ ಬೇಡ, ತ್ಯಾಜ್ಯ ಮತ್ತು ಇ-ತ್ಯಾಜ್ಯ ತಗ್ಗಿಸುವುದು ಸೇರಿ ಪರಿಸರ ಸ್ನೇಹಿ ಜೀವನ ಶೈಲಿಯ ವಿವಿಧ ವಿಷಯಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಎರಡು ದಿನಗಳ ಈ ಪ್ರದರ್ಶನವನ್ನು ಬುಧವಾರ ಉದ್ಘಾಟಿಸಲಾಯಿತು. ವಿಶ್ವಸಂಸ್ಥೆಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳು ಹಾಗೂ ರಾಜತಾಂತ್ರಿಕರು ಪಾಲ್ಗೊಂಡಿದ್ದರು.