ನವದೆಹಲಿ: ಕೇಂದ್ರ ಸರ್ಕಾರ ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ಸಂಬಂಧ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಬದಲಾಯಿಸುವ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ತಿದ್ದುಪಡಿ ಮಸೂದೆ, 2023 ಅನ್ನು ಗುರುವಾರ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣ ಹೊಂದುವ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದ್ದ ದೆಹಲಿ ಸೇವಾ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳ ವಾಕ್‌ಔಟ್ ನಡುವೆ ಅಂಗೀಕರಿಸಲಾಯಿತು.
ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಚರ್ಚೆಯ ನಂತರ ದೆಹಲಿ ಸೇವಾ ಮಸೂದೆಯನ್ನು ಅಂಗೀಕರಿಸಲಾಗಿದೆ.
ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ದೆಹಲಿಯಲ್ಲಿ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ನಿಯಮಗಳನ್ನು ರೂಪಿಸುವ ಸಂಪೂರ್ಣ ಹಕ್ಕು ಕೇಂದ್ರಕ್ಕೆ ಇದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಮಸೂದೆಯನ್ನು ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಕೈಜೋಡಿಸಿರುವ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಮಸೂದೆ ಅಂಗೀಕಾರವಾದರೆ ಪ್ರತಿಪಕ್ಷಗಳ ಮೈತ್ರಿ ಮುರಿದು ಬೀಳಲಿದೆ ಎಂದು ಭವಿಷ್ಯ ನುಡಿದರು.
ದೆಹಲಿಯಲ್ಲಿ ಚುನಾಯಿತ ಸರ್ಕಾರವು ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಳ ಮೇಲೆ ನಿಯಂತ್ರಣವನ್ನು ಹೊಂದಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಆದೇಶವನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಲ್ಲಿ ಹೊರಡಿಸಿದ ಸುಗ್ರೀವಾಜ್ಞೆಯನ್ನು ಈ ಮಸೂದೆ ಬದಲಾಯಿಸುತ್ತದೆ.