ನವದೆಹಲಿ: '2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಹಾಗೂ ಅವರ ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದ ಅಪರಾಧಿಗಳು ಮುಸ್ಲಿಮರನ್ನು ಬೇಟೆಯಾಡುವ ರಕ್ತದಾಹ ಹೊಂದಿದ್ದು, ಅದೇ ಉದ್ದೇಶದಿಂದ ಬಾನೊ ಅವರನ್ನು ಬೆನ್ನಟ್ಟಿದ್ದರು' ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಮಾಹಿತಿ ನೀಡಲಾಗಿದೆ.
ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ 11 ಅಪರಾಧಿಗಳಿಗೆ ನೀಡಿದ್ದ ಕ್ಷಮಾಪಣೆ ಹಾಗೂ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು.
ಬಾನೊ ಪರ ವಾದಿಸಿದ ವಕೀಲರಾದ ಶೋಭಾ ಗುಪ್ತಾ ಅವರು, 'ಗರ್ಭಿಣಿಯಾಗಿದ್ದ ಬಾನೊ ಅವರ ಮೇಲೆ ಅಪರಾಧಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಮೊದಲ ಮಗುವನ್ನು ಕಲ್ಲಿಗೆ ಅಪ್ಪಳಿಸಿ ಕೊಂದಿದ್ದರು. ತಮಗೆ ಪರಿಚಿತರಾಗಿದ್ದ ಅಪರಾಧಿಗಳಿಗೆ 'ನಾನು ನಿಮ್ಮ ಸಹೋದರಿ ಇದ್ದಂತೆ' ಎಂದು ಬಾನೊ ಪರಿಪರಿಯಾಗಿ ಬೇಡಿಕೊಂಡಿದ್ದರು. ಇದು ಆ ಕ್ಷಣಕ್ಕೆ ನಡೆದ ಘಟನೆಯಲ್ಲ. ಅಪರಾಧಿಗಳು ಮುಸ್ಲಿಮರನ್ನು ಬೇಟೆಯಾಡಿ ತಮ್ಮ ರಕ್ತದಾಹವನ್ನು ತೀರಿಸಿಕೊಳ್ಳುವ ಉದ್ದೇಶದಿಂದಲೇ ಬಾನೊ ಅವರನ್ನು ಬೆನ್ನಟ್ಟಿದ್ದರು. 'ಇವರು ಮುಸ್ಲಿಮರು. ಇವರನ್ನು ಕೊಲ್ಲಿ' ಎಂದು ಘೋಷಣೆಯನ್ನೂ ಕೂಗಿದ್ದರು. ಇದು ಅಸಾಮಾನ್ಯ, ಅಪರೂಪದ ಅಪರಾಧದ ಪ್ರಕರಣವಾಗಿದ್ದು ಕೋಮುದ್ವೇಷದಿಂದಲೇ ಇದು ನಡೆದಿದೆ ಎಂಬುದನ್ನು ಹೈಕೋರ್ಟ್ ಗಮನಿಸಿದೆ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'11 ಅಪರಾಧಿಗಳನ್ನು 2022ರ ಆಗಸ್ಟ್ 15ರಂದು ಕ್ಷಮಾಪಣೆ ನೀಡಿ ಬಿಡುಗಡೆ ಮಾಡಲಾಗಿದ್ದು, ಅಪರಾಧಿಗಳು ಜೈಲಿನಿಂದ ಹೊರಬಂದು ಸಂಭ್ರಮಿಸಿದಾಗಲೇ ಈ ವಿಷಯ ಬಿಲ್ಕಿಸ್ ಬಾನೊ ಅವರಿಗೆ ತಿಳಿದಿದೆ' ಎಂಬುದನ್ನೂ ಶೋಭಾ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಅಪರಾಧಿಗಳಿಗೆ ನೀಡಿರುವ ಕ್ಷಮಾಪಣೆಯನ್ನು ವಿರೋಧಿಸಿದ ಶೋಭಾ ಗುಪ್ತಾ, 'ಈ ಅಪರಾಧವು ಕ್ಷಮಿಸಲು ಸಾಧ್ಯವಿಲ್ಲದಂತಹದ್ದು. ಇದರಿಂದಾಗಿ ಸಮಾಜಕ್ಕೆ ತಪ್ಪು ಸಂದೇಶವು ದೊಡ್ಡಮಟ್ಟದಲ್ಲಿ ಹೋಗುತ್ತದೆ' ಎಂದು ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ವಿರೋಧಿಸಿದ್ದ ಸಿಬಿಐನ ನಿಲುವನ್ನೂ ಉಲ್ಲೇಖಿಸಿದರು.
ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠವು ಮಂಗಳವಾರಕ್ಕೆ ಮುಂದೂಡಿದೆ.