ಇಂಫಾಲ: ಸೀತಾರಾಮ ಯೆಚೂರಿ ನೇತೃತ್ವದ ಸಿಪಿಐ(ಎಂ) ಪಕ್ಷದ ನಿಯೋಗವು ಮಣಿಪುರ ರಾಜ್ಯಪಾಲರಾದ ಅನುಸೂಯ ಊಕಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ನಿರಾಶ್ರಿತರಾಗಿ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವವರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದೆ.
ಇಂಫಾಲ: ಸೀತಾರಾಮ ಯೆಚೂರಿ ನೇತೃತ್ವದ ಸಿಪಿಐ(ಎಂ) ಪಕ್ಷದ ನಿಯೋಗವು ಮಣಿಪುರ ರಾಜ್ಯಪಾಲರಾದ ಅನುಸೂಯ ಊಕಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಯಿಂದಾಗಿ ನಿರಾಶ್ರಿತರಾಗಿ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿರುವವರ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದೆ.
ಈ ಬಗ್ಗೆ ರಾಜ್ಯಭವನ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಯೆಚೂರಿ ನೇತೃತ್ವದ ತಂಡವು ಶುಕ್ರವಾರ ಚುರಚಂದಪುರ ಹಾಗೂ ಮೊಯಿರಂಗ್ ಪ್ರದೇಶದಲ್ಲಿರುವ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ್ದು, ಅಲ್ಲಿ ರಾಜ್ಯ ಸರ್ಕಾರ, ಸ್ಥಳೀಯಾಡಳಿತ ಮಾಡಿರುವ ವ್ಯವಸ್ಥೆ ಹಾಗೂ ಅದರ ನಿರ್ವಹಣೆ ತೃಪ್ತಿದಾಯಕವಾಗಿಲ್ಲ ಎಂದು ರಾಜ್ಯಪಾಲರ ಬಳಿ ಹೇಳಿದ್ದಾಗಿ ಪ್ರಕಟಣೆ ತಿಳಿಸಿದೆ.
ಈ ನಿರಾಶ್ರಿತರ ಶಿಬಿರಗಳಲ್ಲಿ ಮಕ್ಕಳು ಹಾಗೂ ಹಾಲುಣಿಸುವ ಮಹಿಳೆಯರಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಇದೇ ಶಿಬಿರಗಳಲ್ಲಿ ಮಕ್ಕಳ ಜನನ ಕೂಡ ಆಗುತ್ತಿವೆ ಎನ್ನುವ ವಿಚಾರವನ್ನು ನಿಯೋಗವು ರಾಜ್ಯಪಾಲರ ಗಮನಕ್ಕೆ ತಂದಿದೆ. ಅಲ್ಲದೆ ಇಂಥ ಪರಿಸ್ಥಿತಿಯಲ್ಲಿ ಈ ನಿರಾಶ್ರಿತರು ಆಶಾಭಾವನೆಯಿಂದ ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದೆ.
ಮೂರು ದಿನಗಳ ಭೇಟಿಗಾಗಿ ಈ ನಿಯೋಗವು ಶುಕ್ರವಾರ ಮಣಿಪುರಕ್ಕೆ ಬಂದಿಳಿದಿದೆ.
'ಈಗ ಇರುವ ಪರಿಸ್ಥಿತಿಗೆ ರಾಜಕೀಯ ಪರಿಹಾರ ಮಾತ್ರ ಸಾಧ್ಯ. ಪೊಲೀಸ್ ಠಾಣೆಗಳಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುವ ವಿಷಯ ನಿಜಕ್ಕೂ ಆಘಾತಕಾರಿ' ಎಂದು ಯೆಚೂರಿ ಹೇಳಿದ್ದಾರೆ.
ಸದ್ಯದ ಸಂಘರ್ಷ ತಡೆಯಲು ಎಲ್ಲಾ ನಾಯಕರು ಪಕ್ಷಭೇದವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಸಹಕರಿಸಬೇಕು. ಹಿಂಸೆ ಎಲ್ಲದಕ್ಕೂ ಪರಿಹಾರವಲ್ಲ ಎಂದು ಊಕಿ ಅವರು ನಿಯೋಗದೊಂದಿಗೆ ಹೇಳಿದ್ದಾರೆ.
ಅಲ್ಲದೆ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ತಾವು ವೈಯಕ್ತಿಕವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದಾಗಿ ರಾಜ್ಯಪಾಲರು ನಿಯೋಗದೊಂದಿಗೆ ಹೇಳಿದ್ದಾರೆ.