ಮಂಜೇಶ್ವರ: 1975 ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧ ಜೀವದ ಹಂಗು ತೊರೆದು ಅನ್ನ ನೀರು ಬಿಟ್ಟು ಹೋರಾಡಿದ ಕಾರ್ಯಕರ್ತರು ರಾಷ್ಟ್ರಪ್ರೇಮದ ಪ್ರತೀಕ.ಯಾವುದೇ ಸ್ವಾರ್ಥ, ಆಕಾಂಕ್ಷೆ ಇಲ್ಲದೆ ಮನೆ ಮಠ ಕುಟುಂಬವನ್ನು ತೊರೆದು ದೇಶದ ದ್ವಿತೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹೋರಾಟಗಾರರ ಅನುಭವ, ಸಮರ ನೀತಿಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ ವಿ.ರವೀಂದ್ರನ್ ಅವರ ಸಾಧನೆಯು ಶ್ಲಾಘನೀಯ ಎಂದು ರಾ.ಸ್ವ.ಸಂ. ದ ಕುಟುಂಬ ಪ್ರಬೋಧನ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದರು.
ಹಿರಿಯ ಸಾಮಾಜಿಕ ಕಾರ್ಯಕರ್ತ, ವಕೀಲ ವಿ.ರವೀಂದ್ರನ್ ಅವರು ರಚಿಸಿದ "ತುರ್ತು ಪರಿಸ್ಥಿತಿ ಕರಾಳ ದಿನಗಳು" ಎಂಬ ಕೃತಿಯ ಕನ್ನಡ ಅನುವಾದಿತ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿ.ಹಿಂ.ಪ.ಜಿಲ್ಲಾಧ್ಯಕ್ಷÀ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ..ಕೆ.ಕೃಷ್ಣದಾಸ್, ಹಿರಿಯ ಸಾಹಿತಿ ಡಾ.ರಮಾನಂದ ಬನಾರಿ, ಕೃತಿಯ ಅನುವಾದ ಮಾಡಿದ ಸಾಹಿತಿ, ನಿವೃತ್ತ ಉಪನ್ಯಾಸಕಿ ಡಾ.ಪ್ರಮೀಳಾ ಮಾಧವ್, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಪೆÇ್ರ.ಪಿ.ನಾರಾಯಣ ಮೂಡಿತ್ತಾಯ, ತುರ್ತು ಪರಿಸ್ಥಿತಿ ಹೋರಾಟಗಾರರ ಸಂಘಟನೆಯ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಆರ್.ಮೋಹನನ್, ಕೃತಿಯ ಲೇಖಕ ವಿ.ರವೀಂದ್ರನ್, ಬಿಜೆಪಿ ನೇತಾರ ಎಂ.ಸಂಜೀವ ಶೆಟ್ಟಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹರಿಶ್ಚಂದ್ರ ಮಂಜೇಶ್ವರ ಸ್ವಾಗತಿಸಿ, ಮಹಾಬಲ ರೈ ವಂದಿಸಿದರು. ಬಿಡುಗಡೆಗೊಂಡ ಬಳಿಕ ಪ್ರಥಮ ಪ್ರತಿಯನ್ನು ತುರ್ತು ಪರಿಸ್ಥಿತಿ ಹೋರಾಟಗಾರರಾದ ಎಂ.ಕೆ.ಭಟ್ ಪೈವಳಿಕೆ ಸ್ವೀಕರಿಸಿದರು.
ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಭಾಗವಹಿಸಿ ಪೋಲೀಸರ ದೌರ್ಜನ್ಯ, ಸೆರೆಮನೆ ವಾಸ ಅನುಭವಿಸಿದ್ದ ಸುಮಾರು ಇನ್ನೂರು ಮಂದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.