ಶಿಮ್ಲಾ: "ಇಂತಹ ದುಸ್ಥಿತಿಯಲ್ಲಿ ನೋವು ಅನುಭವಿಸುವುದಕ್ಕಿಂತ ಸಾಯುವುದೇ ಉತ್ತಮ" ಎಂದು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವ ಮಹಿಳೆ ಪ್ರಮೀಳಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆಗಸ್ಟ್ 23 ರಂದು ಬೆಳಗ್ಗೆ ಸಂಭವಿಸಿದ ಭೂಕುಸಿತದಲ್ಲಿ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆ (IGMCH) ಬಳಿ ಇರುವ ಸರ್ಕಾರಿ ಕ್ವಾಟರ್ಸ್ ಪ್ರಾರಿ ಹೌಸ್ ಭಾಗಶಃ ಹಾನಿಯಾಗಿದೆ. ಈ ಕ್ವಾಟರ್ಸ್ ನಲ್ಲಿ ಪ್ರಮೀಳಾ ಅವರು ತಮ್ಮ ಅನಾರೋಗ್ಯದ ತಾಯಿಯೊಂದಿಗೆ ವಾಸಿಸುತ್ತಿದ್ದರು.
ಪಿಟಿಐ ಜೊತೆ ತಮ್ಮ ಸಂಕಟವನ್ನು ತೋಡಿಕೊಂಡ ಪ್ರಮೀಳಾ, “ನಾನು ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮತ್ತು 2016 ರಿಂದ ಚಿಕಿತ್ಸೆ ಪಡೆಯುತ್ತಿರುವ ನನ್ನ 75 ವರ್ಷದ ತಾಯಿಯೊಂದಿಗೆ ವಾಸಿಸುತ್ತಿದ್ದೇನೆ. ಈಗ ಎಲ್ಲವನ್ನೂ ಕಳೆದುಕೊಂಡಿದ್ದೇನೆ.
ಸಿಟಿ ಮಾರ್ಕೆಟ್‌ನ ರಾಮ್‌ನಗರದ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದ ನಾನು ಆರ್ಥಿಕ ಹಿಂಜರಿತದಿಂದ ಕಳೆದ ವಾರ ಆ ಕೆಲಸವನ್ನು ಕಳೆದುಕೊಂಡಿದ್ದೇನೆ.
"ವಾಸಕ್ಕೆ ಸ್ಥಳವಿಲ್ಲದ ಕಾರಣ ನಾನು ಗುರುವಾರ ರಾತ್ರಿ ಐಜಿಎಂಸಿಎಚ್‌ನಲ್ಲಿ ಮಲಗಿದ್ದೆ" ಎಂದು ತಂದೆಯಿಲ್ಲದ ಮತ್ತು ಪತಿಯಿಂದ ಬೇರ್ಪಟ್ಟಿರುವ ಪ್ರೊಮೀಳಾ ಅವರು ಹೇಳಿದ್ದಾರೆ.
ನಾನು ಕೆಲಸಕ್ಕಾಗಿ ತೀವ್ರವಾಗಿ ಹುಡುಕುತ್ತಿದ್ದೇನೆ ಮತ್ತು ನನ್ನ ತಾಯಿಯ ಚಿಕಿತ್ಸೆಗಾಗಿ ನನಗೆ ಹಣದ ಅವಶ್ಯಕತೆ ಇರುವುದರಿಂದ ಸ್ವಚ್ಛಗೊಳಿಸುವ ಕೆಲಸ ಸೇರಿದಂತೆ ಯಾವುದೇ ಕೆಲಸ ಮಾಡಲು ಸಿದ್ಧಳಿದ್ದೇನೆ ಎಂದು 10ನೇ ತರಗತಿವರೆಗೆ ಓದಿರುವ ಪ್ರಮೀಳಾ ತಿಳಿಸಿದ್ದಾರೆ.
"ನಮ್ಮ ವಸ್ತುಗಳನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ ಮತ್ತು ಕುಸಿದ ಮನೆಯಿಂದ ಹೊರಗೆ ಓಡಿ ಬರುವಾಗ ನಾವು ಧರಿಸಿದ್ದ ಬಟ್ಟೆ ಮಾತ್ರ ಉಳಿದಿದೆ" ಎಂದು ಭೂಕುಸಿತದಿಂದ ಸಂತ್ರಸ್ತರಾದ ಸುಮನ್ ಅವರು ಹೇಳಿದ್ದಾರೆ.
ಭೂಕುಸಿತದಲ್ಲಿ ನಾವು ಸರ್ವಸ್ವವನ್ನೂ ಕಳೆದುಕೊಂಡಿದ್ದು, ಮಗನ ಶಾಲಾ ಶುಲ್ಕ ಕಟ್ಟಲೂ ಹಣವಿಲ್ಲ ಎಂದು ಮನೆ ಕೆಲಸ ಮಾಡುತ್ತಿರುವ ಸುಮನ್ ತಿಳಿಸಿದ್ದಾರೆ.
ತಮಗೆ ಸೂರು ಇಲ್ಲ, ಬಟ್ಟೆ ಇಲ್ಲ, 5ನೇ ತರಗತಿ ಓದುತ್ತಿರುವ ಮಗನ ಪುಸ್ತಕಗಳೂ ಭೂಕುಸಿತದಲ್ಲಿ ಕೊಚ್ಚಿ ಹೋಗಿವೆ ಎಂದಿದ್ದಾರೆ.
ಶಿಮ್ಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಸಮ್ಮರ್ ಹಿಲ್ ಭೂಕುಸಿತದಲ್ಲಿ 17 ಮಂದಿ, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.