ಬದಿಯಡ್ಕ :'ಸಪ್ತಭಾಷಾ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಮಳಿಯಾಳಿಗಳ ಜೊತೆಗೆ ಬಹುಭಾಷಿಗರೂ ಕೂಡಾ ಓಣಂ ಆಚರಿಸುತ್ತಾರೆ. ಓಣಂ ಹಬ್ಬವು ಐಕ್ಯತೆ ಹಾಗೂ ಸೌಹಾರ್ದತೆಯ ಸಂಕೇತ. ಹಿಂದೆ ಮಾವೇಲಿಯ ಆಳ್ವಿಕೆಯಲ್ಲಿ ಕೇರಳದಲ್ಲಿ ಸುಭಿಕ್ಷೆ ಇತ್ತು. ಜನತೆ ಸಂತೋಷದಿಂದ ಇದ್ದರು. ಈ ನೆನಪಿನಲ್ಲಿ ಓಣಂ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಎಲ್ಲಾ ಹಬ್ಬಗಳಲ್ಲೂ ಕೂಡಾ ಯಾರೂ ಉಪವಾಸ ಇರಬಾರದು ಎಂಬ ಸಂದೇಶವನ್ನು ಓಣಂ ಭೋಜನ ನೀಡುತ್ತದೆ' ಎಂದು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕ್ಕುನ್ನು ಹೇಳಿದರು.
ಅವರು ಬದಿಯಡ್ಕ ಸಮೀಪದ ಪುಳಿತ್ತಡಿಯ ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ಭಾನುವಾರ ನಡೆದ 18ನೇ ವರ್ಷದ ಓಣಂ ಆಚರಣೆ ಹಾಗೂ ಸಂಸ್ಥೆಯ ನೂತನ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದರು.
'ಆಧುನಿಕ ಸಂಗೀತದ ಭರಾಟೆಯಲ್ಲಿ ಪರಂಪರೆಯ ಶಾಸ್ತ್ರೀಯ ಸಂಗೀತವನ್ನು ಮರೆಯಬಾರದು. ಶಾಸ್ತ್ರೀಯ ಸಂಗೀತವು ಚಿನ್ನದಷ್ಟು ಮೌಲ್ಯಯುತವಾದದ್ದು. ಮನದ ಕತ್ತಲೆಯನ್ನು, ನೋವನ್ನೂ ಶಮನ ಮಾಡುವ ಶಕ್ತಿ ಶಾಸ್ತ್ರೀಯ ಸಂಗೀತಕ್ಕೆ ಇದೆ. ಪಕ್ಷಿ, ಪ್ರಾಣಿ, ಉರಗಾದಿಗಳೂ ಕೂಡಾ ಸಂಗೀತವನ್ನು ಆಸ್ವಾದಿಸುತ್ತವೆ. ಕೇರಳ ಸರ್ಕಾರದಿಂದ ಈ ಸಂಸ್ಥೆಯ ಅಭಿವೃದ್ಧಿಗೆ ಅಗತ್ಯವಾದ ಅನುದಾನವನ್ನು ನೀಡಲು ಪ್ರಯತ್ನಿಸುತ್ತೇನೆ' ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಮುಖಂಡರಾದ ಆನಂದ ಕೆ ಮವ್ವಾರು ಅವರು 'ಕನ್ನಡಿಗರಿಗೆ ದೀಪಾವಳಿ ಹಬ್ಬವು ಪ್ರಧಾನವಾದರೂ, ಮಲಯಾಳಿಗರ ಹಬ್ಬಗಳು, ಸಂಪ್ರದಾಯ ಹಾಗೂ ಆಚರಣೆಗಳಲ್ಲಿ ಯಾವುದೇ ಅಸಮಾಧಾನ ಇಲ್ಲವೆಂಬ ಸಂದೇಶದ ಹಿನ್ನೆಲೆಯಲ್ಲಿ ಕನ್ನಡಿಗರೂ ಕೂಡಾ ಓಣಂ ಹಬ್ಬವನ್ನು ಆಚರಿಸುತ್ತಾರೆ. ಇದು ಕನ್ನಡಿಗರ ಸೌಹಾರ್ದತೆಯ ಸ್ಪಂದನೆ' ಎಂದು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ರಾಜಾರಾಮ ಪೆರ್ಲ ಅವರು ಮಾತನಾಡಿ,'ಸಂಗೀತಕ್ಕೆ ಮನಸ್ಸನ್ನು ತಣಿಸುವ ಹಾಗೂ ಸುಸ್ಥಿತಿಯಲ್ಲಿ ಇರಿಸುವ ಶಕ್ತಿ ಇದೆ. ತಂತ್ರಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಸಂಗೀತವು ವiನಸ್ಸು ಎಂಬ ಸಾಫ್ಟ್‍ವೇರ್ ಹಾಗೂ ದೇಹವೆಂಬ ಹಾರ್ಡ್‍ವೇರ್ ಅನ್ನು ಸಮತೋಲನದಲ್ಲಿ ಹಾಗೂ ಸುಸ್ಥಿತಿಯಲ್ಲಿ ಇರಿಸುವ ಶಕ್ತಿ ಹೊಂದಿದೆ.' ಎಂದು ಹೇಳಿದರು.
ಗಾನಪ್ರವೀಣ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮರು ಪೆರ್ಲ ಕೃಷ್ಣ ಭಟ್ಟರ ಸಂಸ್ಮರಣೆ ಮಾಡಿ, ಓಣಂ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ರಂಜಿಸಿದರು. ಸಭೆಯಲ್ಲಿ ವಾರ್ಡ್ ಸದಸ್ಯೆ ಎಸ್ ಮೀನಾಕ್ಷಿ, ರಾಘವೇಂದ್ರ ಕೆದಿಲಾಯ ಎಡನೀರು ಮೊದಲಾದವರು ಇದ್ದರು. ಡಾ. ಮಾಧವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳ್ಳಪದವು ಯೋಗೀಶ ಶರ್ಮ ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾದೋಪಾಸನ ಸಂಗೀತ ಕಾರ್ಯಕ್ರಮ, ಹೂವಿನ ರಂಗವಲ್ಲಿ ರಚನೆ, ಓಣ ಭೋಜನ(ಸದ್ಯ) ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು, ಹಿತೈಷಿಗಳು ಭಾಗವಹಿಸಿದ್ದರು.