ನವದೆಹಲಿ: ವಿದೇಶಿ ವಿಶ್ವವಿದ್ಯಾಲಯಗಳ ಪದವಿಗಳಿಗೆ ತತ್ಸಮಾನ ಅನುಮೋದನೆ ನೀಡಿ ಮಾನ್ಯತೆ ಪ್ರಮಾಣಪತ್ರ ನೀಡುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮಾರ್ಗದರ್ಶಿ ಸೂತ್ರಗಳ ಕರಡು ನಿಯಮಾವಳಿಯನ್ನು ರೂಪಿಸಿದೆ.
ಈ ಕರಡು ಮಾರ್ಗದರ್ಶಿ ಸೂತ್ರಗಳ ನಿಯಮಗಳು ದೂರಶಿಕ್ಷಣ ಹಾಗೂ ಆನ್‌ಲೈನ್ ಸ್ವರೂಪದಲ್ಲಿ ಪಡೆದಿರುವ ಯಾವುದೇ ಪದವಿಗಳಿಗೆ ಅನ್ವಯಿಸುವುದಿಲ್ಲ.
ವಿದೇಶಿ ವಿಶ್ವವಿದ್ಯಾಲಯಗಳು ಭಾರತದ ಗಿಫ್ಟ್ ಸಿಟಿಯಲ್ಲಿ (ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್ ಸಿಟಿ) ಕ್ಯಾಂಪಸ್ ತೆರೆಯುವ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಹಾಗೂ ಭಾರತೀಯ ವಿಶ್ವವಿದ್ಯಾಲಯಗಳು ಜಂಟಿ ಪದವಿ ಕುರಿತು ವಿದೇಶಿ ಸಂಸ್ಥೆಗಳ ಜೊತೆಗೆ ಒಪ್ಪಂದಕ್ಕೆ ಮುಂದಾಗಿರುವ ಹೊತ್ತಿನಲ್ಲಿ ಈ ಕರಡು ಸಿದ್ಧಗೊಂಡಿದೆ.
ಯುಜಿಸಿ ರೂಪಿಸಿರುವ 'ವಿದೇಶಿ ಶಿಕ್ಷಣ ಸಂಸ್ಥೆಗಳ ಪದವಿ ತತ್ಸಮಾನ ಮಾನ್ಯತೆ ನೀಡುವ ನಿಯಮಗಳು 2023' ಕರಡು ನಿಯಮಗಳು ಅಂತರರಾಷ್ಟ್ರೀಯವಾಗಿ ಪ್ರಸ್ತುತವಾಗಿರುವ ಪಠ್ಯಕ್ರಮ, ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗ ಕುರಿತ ಅಂಶಗಳನ್ನು ಒಳಗೊಂಡಿದೆ.
ವಿದ್ಯಾರ್ಥಿಯು ಸಾಮಾನ್ಯ ಸ್ವರೂಪದಲ್ಲಿ, ವ್ಯಕ್ತಿಗತವಾಗಿ (ಆನ್‌ಲೈನ್ ಅಥವಾ ದೂರ ನಿಯಂತ್ರಣ ಶಿಕ್ಷಣ ಪದವಿ ಹೊರತುಪಡಿಸಿ) ಪದವಿ ಪಡೆದಿರಬೇಕು. ನಿಗದಿತ ಕೋರ್ಸ್‌ಗೆ ಪ್ರವೇಶದ ಅಗತ್ಯಗಳು, ಅದಕ್ಕೆ ಸಮಾನವಾದ ಭಾರತದಲ್ಲಿನ ಕೋರ್ಸ್ ಸ್ವರೂಪಕ್ಕೆ ಪೂರಕವಾಗಿರಬೇಕು ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.
ಯುಜಿಸಿ ನಿಯಮಗಳ ಅನುಸಾರ, ತತ್ಸಮಾನ ಎಂದು ಮಾನ್ಯತೆ ನೀಡಿ ನೀಡಲಾಗುವ ಪ್ರಮಾಣಪತ್ರವನ್ನು ಭಾರತದಲ್ಲಿ ವಿಶ್ವವಿದ್ಯಾಲಯಗಳಲ್ಲಿನ ಪ್ರವೇಶ ಅಥವಾ ಉದ್ಯೋಗವಕಾಶಕ್ಕಾಗಿ ಪರಿಗಣಿಸಲಾಗುತ್ತದೆ.
ಪ್ರಸ್ತುತ, ಅಖಿಲ ಭಾರತ ವಿಶ್ವವಿದ್ಯಾಲಯಗಳ (ಎಐಯು) ಮೌಲ್ಯಮಾಪನ ವಿಭಾಗವು ವಿದೇಶಗಳ ಶಿಕ್ಷಣ ಸಂಸ್ಥೆಯಿಂದ ಪಡೆದಿರುವ ಪದವಿಗೆ ತತ್ಸಮಾನ ಪ್ರಮಾಣಪತ್ರವನ್ನು ನೀಡುತ್ತಿದೆ. ಕರಡು ನಿಯಮ ಜಾರಿಗೆ ಬಂದರೆ, ಯುಜಿಸಿಯು ವಿದೇಶಿ ಪದವಿಗಳಿಗೆ ತತ್ಸಮಾನ ಎಂದು ಗುರುತಿಸುವ ಪ್ರಮಾಣಪತ್ರವನ್ನು ನೀಡಲಿದೆ.