ಕಾಸರಗೋಡು: ಕೋಟಿಕುಳಂ ರೈಲ್ವೆ ಹಳಿಯಲ್ಲಿ ಕಲ್ಲು, ಕ್ಲೋಸೆಟ್ ತುಣುಕುಗಳನ್ನಿರಿಸುವ ಮೂಲಕ ಬುಡಮೇಲು ಕೃತ್ಯದ ಸಂಚು ನಡೆಸಿರುವ ಪ್ರಕರಣದ ಬಗ್ಗೆ ತನಿಖೆಗಾಗಿ ಬೇಕಲ ಡಿವೈಎಸ್‍ಪಿ ಸಿ.ಕೆ ಸುನಿಲ್‍ಕುಮಾರ್ ನೇತೃತ್ವದ ವಿಶೇಷ ತಮಡ ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರ ಮೇಲ್ನೋಟದಲ್ಲಿ ತನಿಖೆ ನಡೆಯುತ್ತಿದೆ.
ಕಾಸರಗೋಡು ಕೋಟಿಕುಳಂ ಸನಿಹದ ಚೆಂಬರಿಕ ಸುರಂಗಮಾರ್ಗದ ಸನಿಹ ರೈಲ್ವೆ ಹಳಿಯಲ್ಲಿ ಶೌಚಗೃಹದ ಕ್ಲೋಸೆಟ್ ತುಣುಕು ಹಾಗೂ ಕಲ್ಲುಗಳನ್ನಿರಿಸಿ ಬುಡಮೇಲುಕೃತ್ಯದ ಸಂಚು ರೂಪಿಸಲಾಗಿತ್ತು. ಮಂಗಳೂರು-ಕೊಯಂಬತ್ತೂರು ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲು ಈ ಹಾದಿಯಾಗಿ ಸಾಗುತ್ತಿದ್ದಂತೆ ರೈಲಿಗೆ ಅಪ್ಪಳಿಸಿದ ಶಬ್ದ ಕೇಳಿಸಿದ್ದು, ಈ ಬಗ್ಗೆ ರೈಲಿನ ಲೊಕೋಪೈಲಟ್ ಕಾಸರಗೋಡು ನಿಲ್ದಾಣದ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನಿಡಿದ್ದರು.
ಇಂಟೆಲಿಜೆನ್ಸ್ ಎಸ್.ಪಿ ಭೇಟಿ:
ರೈಲ್ವೆ ಹಳಿಯಲ್ಲಿ ಬುಡಮೇಲು ಕೃತ್ಯದ ಸಂಚು ರೂಪಿಸಿದ್ದ ಬೇಕಲ ಸನಿಹದ ಕೋಟಿಕುಳಂನ ಕಳನಾಡು ಪ್ರದೇಶಕ್ಕೆ ಇಂಟೆಲಿಜೆನ್ಸ್ ರೇಂಜ್ ಎಸ್.ಪಿ ಸಬು ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ತನಿಖೆಯ ಪ್ರಗತಿ ಬಗ್ಗೆ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ಕೆಲವೊಂದು ನಿರ್ದೇಶ ನೀಡಿದರು.