ಕಾಸರಗೋಡು: ರಾಜ್ಯ ಸರ್ಕಾರ ಜನರ ಕಲ್ಯಾಣ ಚಟುವಟಿಕೆಗಳು ಮತ್ತು ಯೋಜನೆಗಳೊಂದಿಗೆ ಏಕತೆ-ಸಾಮರಸ್ಯ ಮೂಡಿಸಲು ಅವಕಾಶ ಕಲ್ಪಿಸುತ್ತಿದೆ ಎಂದು ರಾಜ್ಯ ಬಂದರು, ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯ ಖಾತೆ ಸಚಿವ ಅಹಮ್ಮದ್ ದೇವರಕೋವಿಲ್ ತಿಳಿಸಿದ್ದಾರೆ.
ಅವರು ಕಾಸರಗೋಡು ಸಂಧ್ಯಾರಾಗಂ ತೆರೆದ ಸಭಾಂಗಣದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಕಾಸರಗೋಡು ಸಂಧ್ಯಾರಾಗಂ ಆಡಿಟೋರಿಯನ ಸಂಯುಕ್ತ ಆಶ್ರಯದಲ್ಲಿ ನಡೆದ "ಓಣಂ ಉತ್ಸವ-2023'ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಓಣಂ ಹಬ್ಬವನ್ನಿ ಸ್ವಾಗತಿಸಲು ರಾಜ್ಯ ಸರ್ಕಾರವು ಕಲ್ಯಾಣ ಪಿಂಚಣಿ ಮತ್ತು ಹಬ್ಬದ ಭತ್ಯೆಯಂತಹ ವಿವಿಧ ಕ್ಷೇತ್ರಗಳಿಗೆ 19,000 ಕೋಟಿ ರೂ. ದೈನಂದಿನ ಬಳಕೆಯ ವಸ್ತುಗಳು ಮತ್ತು ತರಕಾರಿಗಳನ್ನು ಸಪ್ಲೈಕೋ, ಕನ್ಸ್ಯೂಮರ್ ಫೆಡ್ ಮತ್ತು ಕುಟುಂಬಶ್ರೀಯಂತಹ ವ್ಯವಸ್ಥೆಗಳ ಮೂಲಕ ಕಡಿಮೆ ದರ ಮತ್ತು ಗುಣಮಟ್ಟದೊಂದಿಗೆ ಜನರಿಗೆ ತಲುಪಿಸಲು ಎಲ್ಲ ವ್ಯವಸ್ಥೆ ಕೈಗೊಮಡಿದೆ. ರಾಜ್ಯದ ಇಪ್ಪತ್ತೈದು ಲಕ್ಷ ವಿದ್ಯಾರ್ಥಿಗಳಿಗೆ ತಲಾ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿರುವ ಓಣಂ ಹಬ್ಬದ ಆಚರಣೆಗೆ ಎಲ್ಲ ರೀತಿಯ ಅವಕಾಶ ಕಲ್ಪಿಸುತ್ತಿದೆ ಎಂದು ತಿಳಿಸಿದರು.
ಪೆರ್ಲ ನವಜೀವನ ವಿಶೇಷ ಬಡ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಗಾಲಿಕುರ್ಚಿ ನೃತ್ಯ, ಶಾಸ್ತ್ರೀಯ ನೃತ್ಯ ಮತ್ತು ಸಮೂಹ ನೃತ್ಯ, ಕೇರಳದ ಪೂರಕಳಿ ಅಕಾಡೆಮಿ ಕಲಾವಿದರು ಪ್ರದರ್ಶಿಸಿದ ಪೂರಕಳಿ, ಚೆಮ್ನಾಡ್ ಗ್ರಾಮ ಪಂಚಾಯತ್ ಕುಟುಂಬಶ್ರೀ ಸದಸ್ಯರು ನಡೆಸಿಕೊಟ್ಟ ತಿರುವಾದಿರ ಹಾಗೂ ನೀಲಾಂಬರಿ ಮ್ಯೂಸಿಕ್ ಬ್ಯಾಂಡ್ ನಡೆಸಿಕೊಟ್ಟ ಫ್ಯೂಷನ್ ಸಂಗೀತ ಕಾರ್ಯಕ್ರಮ ಓಣಂ ಸಂಭ್ರಮಕ್ಕೆ ಮೆರುಗು ನೀಡಿತು. ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ನಗರಸಭೆ ಸದಸ್ಯ ಡಿ. ರಂಜಿತಾ, ಡಿಟಿಪಿಸಿ ಕಾರ್ಯಕಾರಿ ಸಮಿತಿ ಸದಸ್ಯ ಟಿ. ಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಐಎಎಸ್ ಸ್ವಾಗತಿಸಿದರು. ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ವಂದಿಸಿದರು.