ನವದೆಹಲಿ: ಕ್ಷುಲ್ಲಕ ಕಾರಣಕ್ಕೆ ತಮ್ಮ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಿರುವುದು ಸರಿಯಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.
ಕ್ಷುಲ್ಲಕ ಕಾರಣ ನೀಡಿ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ.
ಚರ್ಚೆ ವೇಳೆ ಕೆಲ ಟೀಕೆಗಳನ್ನು ಮಾಡಲಾಗುತ್ತದೆ. ಒಂದು ಹೇಳಿಕೆಯು ಅಸಂಸದೀಯವಾಗಿದ್ದರೆ ಮತ್ತು ಯಾರಿಗಾದರೂ ನೋವು ಉಂಟು ಮಾಡಿದರೆ, ಆ ಕ್ಷಣದಲ್ಲಿ, ಅದು ಅಸಂಸದೀಯ ಮತ್ತು ಬಳಸುವುದು ಸರಿಯಲ್ಲ ಎಂದು ಹೇಳಬಹುದು ಎಂದರು.
'ಉಪರಾಷ್ಟ್ರಪತಿ ಮತ್ತು ಈ ಸದನದ ಅಧ್ಯಕ್ಷರಾಗಿರುವ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನೀವು ಪ್ರಜಾಪ್ರಭುತ್ವ ರಕ್ಷಿಸಬೇಕು. ಯಾರನ್ನೂ ಈ ರೀತಿ ಅಮಾನತು ಮಾಡಬಾರದು' ಎಂದು ಖರ್ಗೆ ಹೇಳಿದರು.
ಚೌಧರಿ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿ, ವ್ಯವಹಾರ ಸಲಹಾ ಸಮಿತಿ ಮತ್ತು ಸಿಬಿಐ ನಿರ್ದೇಶಕರು ಮತ್ತು ಸಿವಿಸಿ ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ. ಈ ಅಮಾನತಿನಿಂದ ಅವರು ಈ ಎಲ್ಲಾ ಸಂಸ್ಥೆಗಳಿಂದಲೂ ವಂಚಿತರಾಗುತ್ತಾರೆ. ಇದು ಒಳ್ಳೆಯದಲ್ಲ ಎಂದು ಖರ್ಗೆ ಹೇಳಿದರು.
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್, 'ಈ ಸದನದ ಸಂಪ್ರದಾಯವೆಂದರೆ ಇತರ ಸದನದ ನಡವಳಿಕೆಯನ್ನು ಇಲ್ಲಿ ಚರ್ಚಿಸಲಾಗುವುದಿಲ್ಲ. ವಿರೋಧ ಪಕ್ಷದ ನಾಯಕರು ನೀಡಿದ ಹೇಳಿಕೆಗಳನ್ನು ಪರಿಶೀಲಿಸಬೇಕು ಮತ್ತು ತೆಗೆದುಹಾಕಬೇಕು' ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರು ಮಾತನಾಡುವ ವೇಳೆ ಕಲಾಪಕ್ಕೆ ಅಡಿಪಡಿಸುತ್ತಿದ್ದ ಆರೋಪದ ಮೇಲೆ ಚೌಧರಿ ಅವರನ್ನು ಗುರುವಾರ ಅಮಾನತುಗೊಳಿಸಿ, ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲಾಗಿದೆ.