ಕುಂಬಳೆ : ಇತಿಹಾಸ ಪ್ರಸಿದ್ಧ ಕುಂಬಳೆ ಸನಿಹದ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವದ ಅಂಗವಾಗಿ 3000 ಫಲವೃಕ್ಷ ಗಿಡಗಳನ್ನು ನೆಡುವ ಬೃಹತ್ ಕಾರ್ಯಕ್ರಮ ಕ್ಷೇತ್ರ ವಠಾರದಲ್ಲಿ ಆ. 20ರಂದು ಜರುಗಲಿದೆ.
ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 20ವರ್ಷಗಳ ಸುದೀರ್ಘ ಕಾಲಾವಧಿಯ ನಂತರ 2024ರ ಕುಂಭಮಾಸದಲ್ಲಿ ಕಳಿಯಾಟ ಮಹೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ವಿವಿಧ ಪ್ರಬೇಧಗಳ 3ಸಾವಿರಫಲವೃಕ್ಷದ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೇರಳ, ಕರ್ನಾಟಕ ಹಾಗೂ ವಿದೇಶದಲ್ಲಿ ನೆಲೆಸಿರುವ ಕ್ಷೆತ್ರಕ್ಕೆ ಸಂಬಂಧಪಟ್ಟ ಮಾಜಬಾಂಧವರು ಯೋಜನೆಯಲ್ಲಿ ಕೈಜೋಡಿಸಲಿರುವರು.
ಶ್ರೀ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರವು ಉತ್ತರ ಕೇರಳದ ಪ್ರಸಿದ್ಧ ಮುಚ್ಚಿಲೋಟ್ ಕ್ಷೇತ್ರಗಳಲ್ಲಿ ಒಂದಾಗಿದ್ದು, ಕಳಿಯಾಟ ಮಹೋತ್ಸವದ ನೆನಪಿಗಾಗಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಮನೆ ಹಾಗೂ ಇತರ ಬಂಧು ಮಿತ್ರಾದಿಗಳ ಮನೆಗಳಲ್ಲೂ ಸಸಿ ನೆಡುವ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 20ರಂದು ಬೆಳಿಗ್ಗೆ 10ಕ್ಕೆ ಏಕಕಾಲದಲ್ಲಿ ಫಲವೃಕ್ಷದ ಸಸಿಗಳನ್ನು ನೆಡಲಾಗುತ್ತದೆ. ಸಿಂಹ ಮಾಸ 28ರಂದು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಂಗಳ ಬೆಳಕು ಸಮಯದಲ್ಲಿ ಕಳಿಯಾಟದ ಔದ್ಯೋಗಿಕ ನಿರ್ಣಯ ಹೊರಬೀಳಲಿದೆ.
ಕ್ಷೇತ್ರಕ್ಕೆ ಸಂಬಂಧಪಟ್ಟು ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುವ 18ರಷ್ಟು ಉಪಸಮಿತಿಗಳು ಸಸಿ ನೆಡುವ ಕರ್ಯಕ್ರಮಕ್ಕೆ ನೇತೃತ್ವ ನೀಡಲಿದೆ.