ಎರ್ನಾಕುಲಂ: ಜ್ವರದಿಂದ ಬಳಲುತ್ತಿರುವ ಮಗುವಿಗೆ ರೇಬೀಸ್ ಲಸಿಕೆ ನೀಡಿದ ಆರೋಪದ ಕೇಳಿ ಬಂದಿರುವ ಘಟನೆ ಕೇರಳದ ಎರ್ನಾಕುಲಂ ಸಮೀಪದ ಅಂಗಮಲ್ಲಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಏಳು ವರ್ಷದ ಮಗುವಿನ ರಕ್ತ ಪರೀಕ್ಷೆಗಾಗಿ ಪ್ರಯೋಗಾಲಯದ ಮುಂದೆ ಕುಳಿತಿದ್ದ ವೇಳೆ ಶುಕ್ರವಾರದಂದು ಈ ಘಟನೆ ನಡೆದಿದ್ದು, ಏಳು ವರ್ಷದ ಬಾಲಕಿಯ ಪ್ರಿಸ್ಕ್ರಿಪ್ಷನ್ ಅನ್ನು ಪರಿಶೀಲಿಸದೆ ನರ್ಸ್ ಚುಚ್ಚುಮದ್ದನ್ನು ನೀಡಿದ್ದಳು.
ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಸೇವೆಯನ್ನು ವಜಾಗೊಳಿಸಲು ಕೇರಳ ಸರಕಾರ ನಿರ್ಧರಿಸಿದೆ. ಅಲ್ಲದೇ ಈ ಕುರಿತು ತನಿಖೆಗೆ ಆದೇಶಿಸಿ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ. ಮಗುವಿನ ಪೋಷಕರು ಬಿಲ್ ಪಾವತಿಸಲು ಹೋದ ಸಂದಂರ್ಭದಲ್ಲಿ, ಮಗು ಏಕಾಂಗಿಯಾಗಿ ಕಾಯುತ್ತಿತ್ತು. ಈ ವೇಳೆ ನರ್ಸ್ ಆಂಟಿ ರೇಬಿಸ್ ಲಸಿಕೆಗಾಗಿ ಕಾಯುತ್ತಿರುವ ಮತ್ತೊಂದು ಮಗು ಎಂದು ತಪ್ಪಾಗಿ ಗ್ರಹಿಸಿ ಲಸಿಕೆ ನೀಡಿರಬಹುದು ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಪೊಲೀಸರು. ನಾವು ಪೋಷಕರ ಹೇಳಿಕೆಯನ್ನು ಪಡೆದಿದ್ದೇವೆ. ಅವರು ವೈದ್ಯರೊಂದಿಗೆ ಸಮಾಲೋಚಿಸಿದ್ದಾರೆ. ರೇಬೀಸ್ ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಕಾರಣ, ಅವರು ದೂರು ದಾಖಲಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ, ಮಗುವನ್ನು ನಿಗಾದಲ್ಲಿ ಇರಿಸಲಾಗಿದ್ದು, ಆಕೆಯ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.