ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತ ಕುಸ್ತಿ ಫೆಡರೇಷನ್‌ನ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು, 'ಲೈಂಗಿಕ ಉದ್ದೇಶವಿಲ್ಲದೇ ಮಹಿಳೆಯನ್ನು ಮುಟ್ಟುವುದು ಅಥವಾ ತಬ್ಬಿಕೊಳ್ಳುವುದು ಅಪರಾಧವಲ್ಲ' ಎಂದು ಬುಧವಾರ ದೆಹಲಿ ಕೋರ್ಟ್ ಮುಂದೆ ಹೇಳಿದ್ದಾರೆ.
ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜಿತ್ ಸಿಂಗ್ ಜಸ್ಪಾಲ್ ಅವರು ತಮ್ಮ ವಿರುದ್ಧ ಆರೋಪಗಳನ್ನು ಹೊರಿಸುವ ಮುನ್ನವೇ ಅದನ್ನು ವಿರೋಧಿಸಿ ತಮ್ಮ ವಕೀಲರ ಮೂಲಕ ಬ್ರಿಜ್ ಭೂಷಣ್ ಅವರು ವಾದ ಮಂಡಿಸಿದ್ದಾರೆ.
ಬ್ರಿಜ್ ಭೂಷಣ್ ಹಾಗೂ ಕುಸ್ತಿ ಫೆಡರೇಷನ್‌ನಿಂದ ಅಮಾನತುಗೊಂಡಿರುವ ಪ್ರಧಾನ ಕಾರ್ಯದರ್ಶಿ ವಿನೋದ್ ತೋಮರ್ ಅವರ ವಿರುದ್ಧ ಆರೋಪಗಳನ್ನು ಹೊರಿಸಬೇಕೇ ಎನ್ನುವ ಕುರಿತು ದೆಹಲಿ ಕೋರ್ಟ್ ಬುಧವಾರದಿಂದ ವಾದಗಳನ್ನು ಆಲಿಸಲು ಪ್ರಾರಂಭಿಸಿದೆ.
'ಭಾರತದ ಹೊರಗೆ ಅಪರಾಧಗಳು ನಡೆದಿವೆ ಎಂದು ಆರೋಪಿಸಲಾಗಿರುವುದರಿಂದ ನ್ಯಾಯಾಲಯಕ್ಕೆ ಈ ಪ್ರಕರಣದ ವಿಚಾರಣೆ ನಡೆಸಲು ಯಾವುದೇ ಅಧಿಕಾರವಿಲ್ಲ' ಎಂದು ಬ್ರಿಜ್ ಭೂಷಣ್ ಪರ ವಕೀಲ ರಾಜೀವ್ ಮೋಹನ್ ಅವರು ಹೇಳಿದರು.
'ಭಾರತದ ವ್ಯಾಪ್ತಿಯಲ್ಲಿ ಈ ಆರೋಪಗಳನ್ನು ಪರಿಗಣಿಸಿದರೆ ಅದರಲ್ಲಿ ಮೂರು ಆರೋಪಗಳನ್ನು ಸುಳ್ಳು ಎನ್ನಬಹುದು. ಭಾರತದಲ್ಲಿ ನಡೆದ ಅಪರಾಧದ ಆರೋಪಗಳನ್ನು ಪರಿಗಣಿಸಿದರೆ ಅಶೋಕ ರಸ್ತೆ ಮತ್ತು ಸಿರಿ ಕೋಟೆಯಲ್ಲಿ ಮಹಿಳೆಯನ್ನು ತಬ್ಬಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ, ಯಾವುದೇ ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಸ್ಪರ್ಶಿಸುವುದು ಮತ್ತು ತಬ್ಬಿಕೊಳ್ಳುವುದು ಅಪರಾಧವಾಗದು' ಎಂದು ಪ್ರತಿಪಾದಿಸಿದರು.
'ಕುಸ್ತಿಯಂಥ ಕ್ರೀಡೆಗಳಲ್ಲಿ ಹೆಚ್ಚಾಗಿ ತರಬೇತುದಾರರು (ಕೋಚ್) ಪುರುಷರೇ ಆಗಿರುತ್ತಾರೆ. ಮಹಿಳಾ ಕೋಚ್‌ಗಳು ಅಪರೂಪ. ಕುಸ್ತಿಯಲ್ಲಿ ಸಾಧನೆಯ ಬಳಿಕ ಆಟಗಾರನನ್ನು ಸಂತೋಷದಿಂದ ತಬ್ಬಿಕೊಂಡರೆ ಅದು ಅಪರಾಧ ಹೇಳಲಾಗದು. ಬ್ರಿಜ್ ಭೂಷಣ್ ವಿಚಾರದಲ್ಲೂ ನಡೆದ ಘಟನೆಯೂ ಅಂಥದ್ದೇ ಅಗಿದೆ. ಪುರುಷ ಕೋಚ್ ಆಟಗಾರರನ್ನು ತಬ್ಬಿಕೊಂಡರೆ ಅದು ಅಪರಾಧವಲ್ಲ' ಎಂದೂ ಬ್ರಿಜ್ ಭೂಷಣ್ ಪರ ವಕೀಲರು ವಾದ ಮಂಡಿಸಿದರು.
ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಗುರುವಾರವೂ ಮುಂದುವರಿಸುವುದಾಗಿ ತಿಳಿಸಿದೆ.