ಬೆಂಗಳೂರು: ಇಸ್ರೋದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಎಲ್ಲೆಡೆ ಹಾರೈಸಲಾಗುತ್ತಿದೆ.
ಚಂದ್ರಯಾನ ಯಶಸ್ಸಿಗೆ ಸಿನಿಮಾ ತಾರೆಯರು, ಕ್ರೀಡಾಪಟುಗಳು, ಉದ್ಯಮಿಗಳು, ರಾಜಕೀಯ ನಾಯಕರು, ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಹಾರೈಸಿದ್ದಾರೆ.
ಅಮಿತಾಬ್ ಬಚ್ಚನ್, ಜ್ಯೂನಿಯರ್ ಎನ್‌ಟಿಆರ್, ಮಾದವನ್, ರಿಷಭ್ ಶೆಟ್ಟಿ, ನಟಿ ಕರೀನಾಕಪೂರ್ ಸೇರಿದಂತೆ ಹಲವಾರು ಮಂದಿ ಶುಭ ಹಾರೈಸಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಸಂದರ್ಭದ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಆಯೋಜಿಸುವಂತೆ ಐಐಟಿ, ಐಐಎಂ ಸೇರಿದಂತೆ ಎಲ್ಲ ವಿಶ್ವ ವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೇಳಿದೆ.
ಅಮೆರಿಕಾ, ಬ್ರಿಟನ್, ಕೆನಡಾ ದೇಶಗಳಲ್ಲೂ ಚಂದ್ರಯಾನ ಯಶಸ್ಸಿಗೆ ಸಾವಿರಾರು ಭಾರತೀಯರು ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಹಾರೈಸಿದ್ದಾರೆ.
ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಮಯ ನಿಗದಿ ಮಾಡಲಾಗಿದೆ. ಇದಕ್ಕಾಗಿ ಇಸ್ರೋ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚಂದ್ರಯಾನ-3 ಯಶಸ್ಸಿಗಾಗಿ ದೇಶ, ವಿದೇಶಗಳಿಂದ ಲಕ್ಷಾಂತರ ಜನರು ಶುಭ ಹಾರೈಸಿದ್ದಾರೆ
ಭೂಮಿಯಿಂದ 3 ಲಕ್ಷದ 84 ಸಾವಿರ ಕಿಲೊ ಮೀಟರ್ ದೂರ ಇರುವ ಚಂದ್ರನ ಬಳಿ ತೆರಳಲು ವಿಕ್ರಮ್ ಲ್ಯಾಂಡರ್ 45 ದಿನಗಳ ಪ್ರಯಾಣ ಮಾಡಿದೆ. ಸದ್ಯ ವಿಕ್ರಮ್ ಲ್ಯಾಂಡರ್ ಚಂದ್ರನಿಂದ 25 ಕಿ.ಮೀ ಎತ್ತರದಲ್ಲಿದ್ದು ಸಂಜೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.