ನವದೆಹಲಿ: ಕೇರಳ ವಿಧಾನಸಭೆ ಸ್ಪೀಕರ್ ಎ.ಎನ್. ಶಂಸೀರ್ ಅವರು ಗಣೇಶ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳ ಸರ್ಕಾರದಿಂದ ವಿವರಣೆ ಕೇಳಿದ್ದಾರೆ.
ವಿವಾದದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರಪತಿ ಕಚೇರಿಯಿಂದ ಕೇರಳ ಮುಖ್ಯ ಕಾರ್ಯದರ್ಶಿ ಡಾ.ವೇಣು ಅವರಿಗೆ ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ ವಕೀಲ ಕೋಶಿ ಜೇಕಬ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ರಾಷ್ಟ್ರಪತಿಗಳು ವಿವರಣೆ ಕೇಳಿರುವರು.
ಅಡ್ವ.ಶಂಸೀರ್ ಅವರು ಗಣೇಶನ ಮೇಲಿನ ದೂಷಣೆಯ ಮಾತುಗಳು ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದು, ಧಾರ್ಮಿಕ ಪೈಪೋಟಿಯನ್ನು ಹುಟ್ಟುಹಾಕಿದೆ ಎಂದು ಕೋಸಿ ಜೇಕಬ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಸಾಂವಿಧಾನಿಕ ಸ್ಥಾನದಲ್ಲಿರುವ ಸ್ಪೀಕರ್ ಸಮುದಾಯದಲ್ಲಿ ಒಡಕು ಮೂಡಿಸುವ ದೂಷಣೆ ಎಸಗಿರುವುದು ಗಂಭೀರ ಅಪರಾಧವಾಗಿದೆ. ಶಂಸೀರ್ ಅವರನ್ನು ಸ್ಪೀಕರ್ ಸ್ಥಾನದಿಂದ ವಜಾಗೊಳಿಸಲು ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ. ಸಾಂವಿಧಾನಿಕ ಸ್ಥಾನದ ಘನತೆಗೆ ಕುಂದುತಂದಿರುವ ಶಂಸೀರ್ ಆಟೋಪ ಭಾರೀ ಚರ್ಚೆ ಹುಟ್ಟುಹಾಕಿದೆ.