ಬದಿಯಡ್ಕ: ಜೀವನದಲ್ಲಿ ಅಹಂಕಾರಪಡಬಾರದು. ಸಹನೆ, ತಾಳ್ಮೆ ಅತೀ ಮುಖ್ಯ. ನಾನು ನನ್ನದು ಎಂಬ ಚಿಂತೆಯನ್ನು ಬಿಟ್ಟು ನಮ್ಮನ್ನು ಮುನ್ನಡೆಸುವ ಶಕ್ತಿಯನ್ನು ಮರೆಯಬಾರದು. ಆಧ್ಯಾತ್ಮ ಚಿಂತನೆಯ ಮೂಲಕ ಜೀವನವನ್ನು ಪಾವನಗೊಳಿಸಲು ಸಾಧ್ಯವಿದೆ ಎಂದು ನ್ಯಾಯವಾದಿ ಪ್ರಶಾಂತಿ ಮೋಹನ್ ಪ್ರಕಾಶ್ ಹೇಳಿದರು.
ಬದಿಯಡ್ಕ ಶ್ರೀರಾಮಲೀಲಾ ಯೋಗಶಿಕ್ಷಣಕೇಂದ್ರದಲ್ಲಿ ಜರಗಿದ ರಾಮಾಯಣ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ದೀಪೋಜ್ವಲನೆಗೈದು ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಮಾತನಾಡಿ ರಾಮನಲ್ಲಿ ಬ್ರಹ್ಮಾಂಡವೇ ಅಡಗಿರುವುದರಿಂದ ಆತ ಬಹು ಆಕರ್ಷಿತ ವ್ಯಕ್ತಿ. ಆತನ ವ್ಯಕ್ತಿತ್ವವೇ ಜನತೆಗೆ ಆದರ್ಶವಾಗಿದೆ. ರಾಮಾಯಣ ಕಾಲದಲ್ಲಿ ನಡೆಯುವಂತಹ ಇಂತಹ ಆಚರಣೆಗಳಿಗೆ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.
ಉದ್ಯಮಿ ರಂಗಶರ್ಮ ಉಪ್ಪಂಗಳ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಮೈರ್ಕಳ ನಾರಾಯಣ ಭಟ್ ವಂದಿಸಿದರು. ವಿಜಯಕುಮಾರ್ ಬಾರಡ್ಕ ಪ್ರಾರ್ಥನೆ ಹಾಡಿದರು. ಸೂರ್ಯನಾರಾಯಣ ವಳಮಲೆ ರಾಮತಾರಕ ಜಪಕ್ಕೆ ನೇತೃತ್ವ ನೀಡಿದರು. ಶಾರದಾ ಎಸ್. ಭಟ್ ಕಾಡಮನೆ ನಿರೂಪಿಸಿದರು.