ಕಾಸರಗೋಡು: ಜಿಲ್ಲೆಯಲ್ಲಿ ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಹಸಿರು ಕ್ರಿಯಾ ಸೇನೆಗೆ ತ್ಯಾಜ್ಯ ಸಂಗ್ರಹದ ಜತೆಗೆ ನೀಡಬೇಕಾದ ಯೂಸರ್ ಫೀ ಕಾನೂನು ಬದ್ಧವಾಗಿದ್ದು, ಈ ಶುಲ್ಕ ನೀಡದಿರುವುದು ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.
ಯೂಸರ್ ಫೀ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಸಿರು ಕ್ರಿಯಾ ಸೇನೆಯ ಮೂಲಕ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲು ಮತ್ತು ಯೂಸರ್ ಫೀ ವಿಧಿಸಲು ಸ್ಥಳೀಯ ಸಂಸ್ಥೆಗಳಿಗೆ ಕಾನೂನುಬದ್ಧವಾಗಿ ಅಧಿಕಾರವಿದೆ. 2016ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್‍ಮೆಂಟ್ ಕಾನೂನಿನ 8 (3) ರ ಪ್ರಕಾರ, ಸ್ಥಳೀಯಾಡಳಿತ ಸಂಸ್ಥೆಯು ಅನುಮೋದಿಸಿದ ನಿಯಮಗಳ ಪ್ರಕಾರ ಮನೆಗಳಿಂದ ಮತ್ತು ಸಂಸ್ಥೆಗಳಿಂದ ಯೂಸರ್ ಫೀ ನೀಡಬೇಕಾಗಿದೆ. ಯೂಸರ್ ಫೀ ಪಾವತಿಸದವರಿಗೆ ದಂಡ ವಿಧಿಸುವ ಬಗ್ಗೆಯೂ ಕಾನೂನಿನಲ್ಲಿ ಸೂಚಿಸಲಾಗಿದೆ. ಹಸಿರು ಕ್ರಿಯಾ ಸೇನಾ ಸದಸ್ಯರು ಕೇರಳದ ಅಜೈವಿಕ ತ್ಯಾಜ್ಯ ಸಂಸ್ಕರಣೆಯ ಅವಿಭಾಜ್ಯ ಅಂಗವಾಗಿದ್ದಾರೆ. ಹಸಿರು ಕ್ರಿಯಾ ಸೇನೆಯ ಸದಸ್ಯರು ತ್ಯಾಜ್ಯ ನಿರ್ವಹಣೆಯ ಮೂಲಕ ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನೂ ಮಾಡುತ್ತಾರೆ. ತ್ಯಾಜ್ಯ ನಿರ್ವಹಣೆಯನ್ನು ಮನೆಗಳಿಂದಲೇ ಆರಂಭಿಸಬೇಕು ಮತ್ತು ಹಸಿರು ಕೇರಳ ಮಿಷನ್ ಚಟುವಟಿಕೆಗಳು ಯಶಸ್ವಿಗೊಳಿಸಲು ಜನರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.