ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾಡಿದ ಪ್ರೇರಣಾದಾಯಕ ಭಾಷಣಗಳ ಸಂಗ್ರಹದ ಎರಡು ಮತ್ತು ಮೂರನೇ ಸಂಪುಟಗಳನ್ನು ಕೇಂದ್ರ ವಾರ್ತೆ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾನುವಾರ ಲೋಕಾರ್ಪಣೆಗೊಳಿಸಿದರು.
ಅಧಿಕಾರದ ಎರಡನೇ ಅವಧಿಯ 2020ರ ಜೂನ್ನಿಂದ 2021ರ ಮೇ ಹಾಗೂ 2021ರ ಜೂನ್ನಿಂದ 2022ರ ಮೇ ಅವಧಿವರೆಗಿನ ಭಾಷಣಗಳನ್ನು ಈ ಸಂಪುಟಗಳಲ್ಲಿ ಸಂಕಲಿಸಲಾಗಿದ್ದು ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ನ ಕುಶಭಾವು ಠಾಕ್ರೆ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಅವುಗಳನ್ನು ಬಿಡುಗಡೆಗೊಳಿಸಲಾಯಿತು. ವಾರ್ತೆ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆ ವಿಭಾಗ ಇವುಗಳನ್ನು ಪ್ರಕಟಿಸಿದೆ.
ಪ್ರಧಾನಿ ಮೋದಿಯವರ ಭಾಷಣಗಳು ಸದಾ ಸ್ಪೂರ್ತಿಯ ಮೂಲವಾಗಿವೆ ಎಂದು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರೂ ಆಗಿರುವ ಅನುರಾಗ್ ಠಾಕೂರ್ ಹೇಳಿದರು. ಅವರ ಪ್ರತಿಯೊಂದು ಭಾಷಣದಲ್ಲಿ ಅಮೂಲ್ಯವಾದ ಪಾಠಗಳಿರುತ್ತವೆ. ಒಳನೋಟಗಳಿಂದ ಸಮೃದ್ಧವಾಗಿರುವ ಅವರ ಭಾಷಣಗಳನ್ನು ಆಯ್ಕೆ ಮಾಡುವುದೇ ಒಂದು ಸವಾಲು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಒಂದು ಸಂಪುಟದಲ್ಲಿ 86 ಹಾಗೂ ಇನ್ನೊಂದರಲ್ಲಿ 80 ಭಾಷಣಗಳನ್ನು ಸಂಕಲಿಸಲಾಗಿದೆ ಎಂದವರು ತಿಳಿಸಿದರು. ಯುಪಿಐ ಮತ್ತು ಭೀಮ್ಂಥ ಆಪ್ಗಳನ್ನು ಪ್ರಸ್ತಾಪಿಸಿದ ಸಚಿವರು, ಡಿಜಿಟಲ್ ಪಾವತಿ ಲೋಕದಲ್ಲಿ ಶೇಕಡ 46ರಷ್ಟು ಗರಿಷ್ಠ ವ್ಯವಹಾರಗಳು ಭಾರತದಲ್ಲೇ ನಡೆಯುತ್ತಿವೆ ಎಂದು ಹೇಳಿದರು. 45 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಮೂಲಕ ಫಲಾನುಭವಿಗಳಿಗೆ ಯೋಜನೆಗಳ ಹಣ ಪರಿಣಾಮಕಾರಿಯಾಗಿ ತಲುಪುತ್ತಿದೆ ಎಂದರು.
ಯುವಜನರ ಪಾತ್ರದ ಮಹತ್ವವನ್ನು ವಿವರಿಸಿದ ಠಾಕೂರ್, ಭಾರತದ ಯುವಜನತೆ ಇಂದು ಉದ್ಯೋಗ ನೀಡುವವರಾಗಿದ್ದಾರೆ ಎಂದರು. ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಸ್ಟಾರ್ಟಪ್ಗಳಿವೆ ಎಂದರು.
ಅಮೂಲ್ಯ ಸಂಪತ್ತು
ಇದೊಂದು ಅಮೂಲ್ಯವಾದ ಸಂಪತ್ತಾಗಿದ್ದು ವಿವೇಕದ ಅಣಿಮುತ್ತುಗಳಾಗಿವೆ ಎಂದು ಮುಖ್ಯಮಂತ್ರಿ ಚೌಹಾಣ್ ಹೇಳಿದರು. ಪ್ರಧಾನಿಯವರ ಮನ್ ಕೀ ಬಾತ್ ಕಾರ್ಯಕ್ರಮ ಜನಸಾಮಾನ್ಯರ ದನಿಯಾಗಿದೆ ಎಂದರು. ತುರ್ತು ಸಾಮಾಜಿಕ ವಿಚಾರಗಳನ್ನು ಅದು ರ್ಚಚಿಸುತ್ತದೆ ಎಂದರು.
ವೈವಿಧ್ಯಮಯ ವಿಷಯಗಳು
ಸ್ಟಾರ್ಟಪ್ ಇಂಡಿಯಾ, ಉತ್ತಮ ಆಡಳಿತ, ಮಹಿಳಾ ಸಬಲೀಕರಣ, ರಾಷ್ಟ್ರೀಯ ಶಕ್ತಿ, ಸ್ವಾವಲಂಬಿ ಭಾರತ, ಜೈ ವಿಜ್ಞಾನ್, ಜೈ ಕಿಸಾನ್ ಮುಂತಾದ ನಾನಾ ವಿಚಾರಗಳ ಬಗ್ಗೆ ಜನಸಾಮಾನ್ಯರನ್ನುದ್ದೇಶಿಸಿ ಮೋದಿ ಮಾಡಿದ ಭಾಷಣಗಳು ಅವುಗಳಲ್ಲಿವೆ. ಇವುಗಳನ್ನು ಯುವಜನರು ಮತ್ತು ಸಂಶೋಧಕರು ಈ ಪುಸ್ತಕಗಳನ್ನು ಓದಬೇಕು ಎಂದು ಅನುರಾಗ್ ಠಾಕೂರ್ ಸಲಹೆ ನೀಡಿದರು.