ನವದೆಹಲಿ: ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಸದೆ ಸದನದಲ್ಲಿ ಮಸೂದೆಗಳನ್ನು ಮಂಡಿಸುವ ಮೂಲಕ ಕೇಂದ್ರ ಸರ್ಕಾರ ಸಂಸತ್ತಿಗೆ ಅಪಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಸರ್ಕಾರ ಮೊದಲು ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಸಬೇಕು.
ಮಣಿಪುರದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಗದ್ದಲ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯ ನಡುವೆ, ಗೃಹ ಸಚಿವ ಅಮಿತ್ ಶಾ ಅವರು ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧ ಎಂದು ಪ್ರತಿಪಾದಿಸಿದ್ದರು. ಅಮಿತ್ ಶಾ ಅವರ ಹೇಳಿಕೆಗೆ ಸೊಪ್ಪು ಹಾಕದ ಪ್ರತಿಪಕ್ಷಗಳು ಮಣಿಪುರ ಹಿಂಸಾಚಾರ ಕುರಿತಂತೆ ಪ್ರಧಾನಿಯವರನ್ನು ಹೇಳಿಕೆ ನೀಡುವಂತೆ ಮಾಡುವ ಕೊನೆಯ ಪ್ರಯತ್ನವಾಗಿ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದವು.
' ಸರಕಾರದ ವಿರುದ್ಧ ನಾವು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಲೋಕಸಭೆಯಲ್ಲಿ ಅದರ ಬಗ್ಗೆ ಚರ್ಚೆ ಆರಂಭಿಸಬೇಕು, ಸದನದಲ್ಲಿ ಬೇರೆ ಯಾವುದೇ ಚರ್ಚೆಗೆ ನಮ್ಮ ಅಭ್ಯಂತರವಿಲ್ಲ, ಆದರೆ, ಮೊದಲು ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭವಾಗಲಿ' ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದರು.
'ಅವಿಶ್ವಾಸ ನಿರ್ಣಯಕ್ಕೆ ತನ್ನದೇ ಆದ ಮಹತ್ವವಿದ್ದು, ಅದರ ಮೇಲಿನ ಚರ್ಚೆ ಬದಿಗೊತ್ತಿ ಸರಕಾರ ಎಲ್ಲ ರೀತಿಯ ವಿಧೇಯಕ, ನೀತಿಗಳನ್ನು crfcege ತರುತ್ತಿದ್ದರೆ ಅದು ಸಂಸತ್ತಿಗೆ ಅವಮಾನ ಮಾಡಿದಂತಾಗುತ್ತದೆ. ಅವಿಶ್ವಾಸ ಗೊತ್ತುವಳಿಯನ್ನು ಬದಿಗೊತ್ತಿ ಬೇರೆ ಚರ್ಚೆ ನಡೆದ ಪರಿಸ್ಥಿತಿ ಹಿಂದೆಂದೂ ಇರಲಿಲ್ಲ' ಎಂದು ಅವರು ಹೇಳಿದ್ದಾರೆ.
ಸರ್ಕಾರವು ಅವಿಶ್ವಾಸ ನಿರ್ಣಯವನ್ನು ದುರ್ಬಲಗೊಳಿಸಿದೆ. ಇತರ ವಿಷಯಗಳನ್ನು ಪ್ರಸ್ತಾಪಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದೂ ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.