ಪ್ಯೊಂಗ್ಯಾಂಗ್ : ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಸ್ಫೋಟವೊಂದು ಸಂಭವಿಸಿದ್ದು ಇದು ಅಲ್ಲಿನ ಸರ್ವಾಧಿಕಾರಿ ಕಿಮ್ ಜೊಂಗ್-ಉನ್ ಅವರ ಹತ್ಯೆ ಯತ್ನ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ನಡೆದ ಈ ಘಟನೆಯಿಂದ ಕಿಮ್ ಜೊಂಗ್-ಉನ್ ಅವರು ತಮ್ಮ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆಂದು ಹೇಳಲಾಗಿದ್ದು ಅವರ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು wionews.com ವರದಿ ಮಾಡಿದೆ.
ಈಗಾಗಲೇ ಕಿಮ್ ಅವರಿಗಾಗಿ ಆಮದಿತ ಸ್ಫೋಟಕ ಪತ್ತೆ ಉಪಕರಣವನ್ನು ತರಿಸಲಾಗಿದೆ ಹಾಗೂ ಅವರ ಸುರಕ್ಷತಾ ತಂಡದಲ್ಲಿ ಬ್ಯಾಲಿಸ್ಟಿಕ್ ಬ್ರೀಫ್‌ಕೇಸ್‌ಗಳನ್ನು ಹೊಂದಿರುವ ಸಿಬ್ಬಂದಿಯೂ ಇದ್ದಾರೆ ಎಂದು ವರದಿಗಳು ಹೇಳಿವೆ.
ಈ ಬ್ಯಾಗ್‌ಗಳನ್ನು ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಇವುಗಳು ಗುಂಡು-ನಿರೋಧಕ ಮಾತ್ರವಲ್ಲದೆ ಇತರ ಹಲವು ವಿಧದಿಂದ ರಕ್ಷಣೆಯೊದಗಿಸುತ್ತದೆ. ಅಪಾಯವಿದೆ ಎಂದಾದಲ್ಲಿ ಸುರಕ್ಷತಾ ಸಿಬ್ಬಂದಿ ಈ ಬ್ಯಾಗ್‌ಗಳನ್ನೆತ್ತಿ ಕಿಮ್ ಜೊಂಗ್ ಅವರನ್ನು ರಕ್ಷಿಸಬಹುದಾಗಿದ್ದು ಇವುಗಳನ್ನು ಫ್ಯಾಬ್ರಿಕ್ ಶೀಲ್ಡ್ ಆಗಿ ಮಡಚಲೂ ಆಗುತ್ತದೆ.
ಕಿಮ್ ಜೊಂಗ್-ಉನ್ ಅವರ ತಂದೆ ಕಿಮ್ ಜಾಂಗ್-ಇಲ್ ಕೂಡ ಇಂತಹುದೇ ಬ್ಯಾಲಿಸ್ಟಿಕ್ ಬ್ರೀಫ್‌ಕೇಸ್‌ಗಳ ರಕ್ಷಣೆ ಹೊಂದಿದ್ದರು. ಇದು ಪೋರ್ಟೇಬಲ್ ಡಿಫ್ರಿಬಿಲ್ಲೇಟರ್ ಕೂಡ ಹೊಂದಿತ್ತು.
ಇದೀಗ ಕಿಮ್-ಜಾಂಗ್ ಉನ್ ಅವರ ಬ್ಯಾಲಿಸ್ಟಿಕ್ ಬ್ರೀಫ್‌ಕೇಸ್‌ಗಳಲ್ಲೂ ಇಂತಹುದೇ ವೈದ್ಯಕೀಯ ಉಪಕರಣಗಳಿವೆಯೇ ಎಂಬ ಕುತೂಹಲ ಮೂಡಿಸಿದೆ.
ಈ ವರ್ಷ ಕಿಮ್ ಜಾಂಗ್-ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ವಿರಳವಾಗಿದೆ. ಇತ್ತೀಚೆಗೆ ನಡೆದ ಸ್ಫೋಟದಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆಂದೂ ತಿಳಿದು ಬಂದಿಲ್ಲ. ಉತ್ತರ ಕೊರಿಯಾ ಆಹಾರ ಸಮಸ್ಯೆ ಎದುರಿಸುತ್ತಿರುವುದರಿಂದ ಆಹಾರ ಕದಿಯಲು ಅನುಕೂಲವಾಗಲೆಂದೇ ಕೆಲವರು ಸ್ಫೋಟ ನಡೆಸಿರುವ ಶಂಕೆಯೂ ಇದೆ.