ಊಟ ಆದ ತಕ್ಷಣ ಮಲಗಬಾರದು, ತಿಂದ ಆಹಾರ ಜೀರ್ಣವಾಗೋಲ್ಲ ಅಂತಾರೆ. ಇದರಿಂದಾನೆ ಗ್ಯಾಸ್ಟ್ರಿಕ್, ಹೊಟ್ಟೆಉಬ್ಬರ ಮುಂತಾದ ಸಮಸ್ಯೆಗಳು ಆರಂಭವಾಗುತ್ತೆ. ಊಟ ಮಾಡಿದ ನಂತರ ಒಂದು ಹತ್ತು ಹೆಜ್ಜೆಯಾದರೂ ನಡೆಯಬೇಕು ಹಿರಿಯರು, ವೈದ್ಯರು ಹೇಳುತ್ತಾರೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗೋದು ಮಾತ್ರವಲ್ಲ. ಇನ್ನೂ ಅನೇಕ ಪ್ರಯೋಜನಗಳಿವೆ. ಅವು ಯಾವುವು ಎನ್ನುವುದನ್ನ ತಿಳಿಯಬೇಕಂದ್ರೆ ಈ ಲೇಖನ ತಪ್ಪದೇ ಓದಿ.
ಊಟವಾದ ನಂತರ ಮಾಡುವ ನಡಿಗೆಯ ಪ್ರಯೋಜನಗಳು ವಾಕಿಂಗ್ ಹಲವು ಪ್ರಯೋಜನಗಳನ್ನು ಹೊಂದಿದೆ. ಇದರಂತೆ ಊಟವಾದ ನಂತರ ವಾಕಿಂಗ್ ಮಾಡೋದು ಕೂಡಾ ಕೆಲವೊಂದು ಸಕಾರಾತ್ಮಕ ಪ್ರಯೋಜನಗಳನ್ನು ಹೊಂದಿದೆ. ಅವೆಂದರೆ,೧. ಜೀರ್ಣಕ್ರಿಯೆ ಸುಧಾರಿಸುತ್ತೆ
ಊಟವಾದ ನಂತರ ವಾಕಿಂಗ್ ಮಾಡುವುದರಿಂದ ಆಗುವ ಮೊದಲ ಪ್ರಯೋಜನವೆಂದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ದೇಹದ ಚಲನೆ ಹೊಟ್ಟೆ ಮತ್ತು ಕರುಳಿನ ಪ್ರಚೋದನೆಯನ್ನು ಉತ್ತೇಜಿಸುವ ಮೂಲಕ ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆಹಾರ ಸೇವಿಸಿದ ನಂತರ ಮಾಡುವ ಈ ಸರಳ ದೈಹಿಕ ವ್ಯಾಯಾಮವು ಜಠರ ಮತ್ತು ಕರುಳಿನ ಆರೋಗ್ಯಕ್ಕೂ ಒಳ್ಳೆಯದು. ಸಾಮಾನ್ಯವಾಗಿ ಜಠರದ ಹುಣ್ಣು ಅಂದರೆ ಅಲ್ಸರ್, ಎದೆಯುರಿ, ಐಬಿಎಸ್, ಡೈವರ್ಟಿಕ್ಯುಲರ್ ಸಮಸ್ಯೆ, ಮಲಬದ್ಧತೆ ಮತ್ತು ಅನ್ನನಾಳದ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗ ಬರದಂತೆ ತಡೆಗಟ್ಟುತ್ತದೆ.
೨. ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು
ಆಹಾರ ಸೇವಿಸಿದ ನಂತರ ನಡೆಯುವುದರಿಂದ ಸಿಗುವ ಇನ್ನೊಂದು ಪ್ರಯೋಜನವೆಂದರೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಬಹುದು. ಟೈಪ್ 1 ಮತ್ತು 2 ಡಯಾಬಿಟಿಸ್ ಹೊಂದಿರುವ ಜನರಿಗೆ ಇದು ವಿಶೇಷವಾಗಿ ಮುಖ್ಯವಾಗಿದೆ. ತಿಂದ ನಂತರ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ಅತಿಯಾದ ಸ್ಪೈಕ್‌ಗಳನ್ನು ತಡೆಯಬಹುದು. ತಿಂದನಂತರ ವಾಕಿಂಗ್ ಮಾಡುವುದರಿಂದ ನಿಮಗೆ ಸಕ್ಕರೆಮಟ್ಟವನ್ನು ನಿಯಂತ್ರಿಸುವ ಔಷಧಿಗಳನ್ನು ಬಳಸುವಂತಹ ಪ್ರಮೇಯವೇ ಬರದು. ಮಧುಮೇಹಿಗಳು ಊಟವಾದ ನಂತರ ಹತ್ತುನಿಮಿಷ ವಾಕಿಂಗ್ ಮಾಡುವುದು, ಇತರ ಸಮಯದಲ್ಲಿ ಮಾಡುವ 30ನಿಮಿಷಗಳ ವಾಕಿಂಗ್‌ನಷ್ಟು ಪ್ರಯೋಜನಕಾರಿ. ಹಾಗಾಗಿ ಡಯಾಬಿಟಿಸ್ ಇರೋರು ಊಟವಾದ ಮೇಲೆ ತಪ್ಪದೇ ವಾಕಿಂಗ್ ಮಾಡಿ.
3. ಹೃದ್ರೋಗದ ಅಪಾಯ ಕಡಿಮೆ ಯಾವುದೇ ದೈಹಿಕ ಚಟುವಟಿಕೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಆದರೆ ನಿಯಮಿತವಾಗಿ, ನಿರ್ದಿಷ್ಟವಾಗಿ ಮಾಡುವ ವ್ಯಾಯಾಮಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಜೊತೆಗೆ ರಕ್ತದೊತ್ತಡವನ್ನೂ ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯರೋಗ ಬರಬಾರದೆಂದರೆ ವಾಕಿಂಗ್‌ನಂತಹ ಸರಳ ವ್ಯಾಯಾಮವೂ ಸಾಕಾಗುತ್ತೆ. ವಾಕಿಂಗ್‌ಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗದಿದ್ದಲ್ಲಿ, ಊಟವಾದ ನಂತರ ಐದರಿಂದ ಹತ್ತುನಿಮಿಷಗಳ ವಾಕ್ ಎಷ್ಟೋ ಸಾಕು. ಆದ್ದರಿಂದ ಊಟವಾದ ನಂತರ ಹತ್ತುಹೆಜ್ಜೆ ನಡೆಯುವುದನ್ನು ಮರೆಯಬೇಡಿ.
4. ತೂಕ ಇಳಿಕೆಗೂ ಸಹಕಾರಿ ಉತ್ತಮ ಆಹಾರ ಪದ್ಧತಿಯ ಜೊತೆಗೆ ವ್ಯಾಯಾಮವೂ ತೂಕ ಇಳಿಕೆಗೆ ಸಹಕಾರಿ. ತೂಕ ಇಳಿಸುವುದಾದರೆ ನೀವು ಎಷ್ಟು ಕ್ಯಾಲೋರಿಯನ್ನು ತೆಗೆದುಕೊಳ್ಳುತ್ತೀರೋ, ಅದಕ್ಕಿಂತ ಹೆಚ್ಚು ಕ್ಯಾಲೋರಿ ಬರ್ನ್ ಮಾಡಬೇಕು. ಅದೇ ಊಟವಾದ ನಂತರ ಮಾಡುವ ನಡಿಗೆಯು ಕ್ಯಾಲೋರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ.
೫. ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ
ಊಟವಾದ ನಂತರ ಸ್ವಲ್ಪ ನಿಮಿಷಗಳ ಕಾಲ ವಾಕ್ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ. ಅಧ್ಯಯನಗಳೇ ತಿಳಿಸಿರುವಂತೆ ದೈನಂದಿನ ಹತ್ತು-ಹದಿನೈದು ನಿಮಿಷಗಳ ವಾಕ್ ರಕ್ತದೊತ್ತಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ. ಹೆಚ್ಚು ರಕ್ತದೊತ್ತಡದ ಸಮಸ್ಯೆ ಇರುವವರು ಊಟವಾದ ನಂತರ ನಡಿಗೆಯನ್ನು ಮಾಡುವುದು ನಿಮ್ಮ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣಕ್ಕೆ ತರಬಹುದು.
ಊಟವಾದ ನಂತರ ವಾಕಿಂಗ್ ಮಾಡುವಾಗ ಈ ಅಂಶ ಗಮನಿಸಿ
ಕೆಲವರಿಗೆ ತಿಂದ ತಕ್ಷಣವೇ ವಾಕಿಂಗ್ ಮಾಡಿದಾಗ ಅಡ್ಡಪರಿಣಾಮಗಳಾಗಬಹುದು. ಕೆಲವರಿಗೆ ಹೊಟ್ಟೆನೋವು, ಅಜೀರ್ಣ, ವಾಕರಿಕೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರವೂ ಆಗಬಹುದು. ಈ ಸಮಸ್ಯೆಯನ್ನು ತಪ್ಪಿಸಲು ಊಟದ ನಂತರ ಹತ್ತು ಹದಿನೈದು ನಿಮಿಷ ಕುಳಿತುಕೊಂಡು, ನಂತರ ವಾಕಿಂಗ್ ಮಾಡಿ. ಸಾಧ್ಯವಾದರೆ ಊಟವಾದ ತಕ್ಷಣವೇ ನೀವು ನಡಿಗೆಯನ್ನು ಪ್ರಾರಂಭಿಸಿದಲ್ಲಿ ನಿಧಾನವಾಗಿನಡೆಯಿರಿ ಜೊತೆಗೆ ನಡೆಯುವ ಅವಧಿಯೂ ಹೆಚ್ಚೇನೂ ಬೇಡ. ಆದಷ್ಟು ಊಟವಾದ ತಕ್ಷಣವೇ ಮಲಗಬೇಡಿ. ರಾತ್ರಿ ಮಲಗುವ ಮುನ್ನ ಎರಡು ಗಂಟೆಗಳ ಮುನ್ನ ಆಹಾರ ಸೇವಿಸಿ. ಸಾಧ್ಯವಾದರೆ ರಾತ್ರಿಯೂ ವಾಕಿಂಗ್ ಮಾಡಿ. ಉತ್ತಮ ಆರೋಗ್ಯಕ್ಕೆ ನಾವು ಸೇವಿಸುವ ಆಹಾರವೂ ಉತ್ತಮವಾಗಿ ಜೀರ್ಣವಾಗಬೇಕು. ಇದನ್ನು ಪಾಲಿಸಿಕೊಂಡು ಹೋಗಬೇಕೆಂದಿದ್ದರೆ ಊಟವಾದ ನಂತರ ವಾಕಿಂಗ್ ಮಾಡುವುದನ್ನು ಮರೆಯಬೇಡಿ.