ಕೋಟಾ (PTI): ಪ್ರವೇಶ ಪರೀಕ್ಷೆಗಳ ಕೋಚಿಂಗ್ ತಾಣವಾಗಿರುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ತಡೆಯುವ ದಿಸೆಯಲ್ಲಿ ಹಾಸ್ಟೆಲ್‌ಗಳ ಬಾಲ್ಕನಿ, ಹಜಾರಗಳಿಗೆ ಬಲೆಗಳನ್ನು ಅಳವಡಿಸಲಾಗುತ್ತಿದೆ. ಕೊಠಡಿಗಳಿಗೆ ಸ್ಪ್ರಿಂಗ್ ಫ್ಯಾನ್‌ಗಳನ್ನು ಅಳವಡಿಸುವ ಕ್ರಮ ಕೈಗೊಂಡ ಬಳಿಕ ಹಾಸ್ಟೆಲ್‌ಗಳ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಈ ರೀತಿಯ ಕ್ರಮಗಳಿಂದ ಹಾಸ್ಟೆಲ್‌ಗಳಲ್ಲಿ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹಾಸ್ಟೆಲ್ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.
'150 ಕೆ.ಜಿ. ತೂಕವನ್ನು ಹೊರುವ ಸಾಮರ್ಥ್ಯದ ಬಲೆಗಳನ್ನು ಹಾಸ್ಟೆಲ್‌ನ ಬಾಲ್ಕನಿ ಮತ್ತು ಹಜಾರಕ್ಕೆ ಅಳವಡಿಸಿದ್ದೇವೆ. ವಿದ್ಯಾರ್ಥಿಗಳು ಎತ್ತರದ ಅಂತಸ್ತಿನಿಂದ ಹಾರಿದರೂ ಅವರ ಪ್ರಾಣಕ್ಕೆ ಅಪಾಯವಿಲ್ಲ' ಎಂದು ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಮಾಲೀಕ ವಿನೋದ್ ಗೌತಮ್ ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಹಾಸ್ಟೆಲ್ ಕೊಠಡಿಗಳಲ್ಲಿ ಸ್ಪ್ರಿಂಗ್ ಸೀಲಿಂಗ್ ಫ್ಯಾನ್‌ಗಳನ್ನು ಅಳವಡಿಸಲು ಜಿಲ್ಲಾಡಳಿತವು ವಾರದ ಹಿಂದೆ ಆದೇಶ ನೀಡಿತ್ತು. ಸ್ಪ್ರಿಂಗ್ ಅಳವಡಿಸಿದ ಫ್ಯಾನ್‌ಗೆ ಜೋತುಬೀಳುತ್ತಿದ್ದಂತೆ ಸ್ಪ್ರಿಂಗ್ ಕೆಳಕ್ಕೆ ಜಗ್ಗುವುದರಿಂದ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಾದ ಜೆಇಇ, ನೀಟ್ ಮುಂತಾದ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಪ್ರತಿ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಟಾಕ್ಕೆ ಬರುತ್ತಾರೆ. 2023ರಲ್ಲಿ ಈವರೆಗೆ ವಿವಿಧ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದ 20 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.