ಕೊಚ್ಚಿ: ತಾಂತ್ರಿಕ ಸಮಸ್ಯೆಯಿಂದಾಗಿ ನೆಡುಂಬಶ್ಶೇರಿಯಿಂದ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾ ವಿಮಾನ ಮತ್ತೆ ಹಿಂದಿರುಗಿದೆ.
ಕೊಚ್ಚಿಯಿಂದ ಶಾರ್ಜಾಕ್ಕೆ ತೆರಳಲಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ವಾಪಸ್ ಕರೆಸಲಾಯಿತು.
ಬುಧವಾರ ರಾತ್ರಿ 10.30ಕ್ಕೆ ಟೇಕಾಫ್ ಆದ ವಿಮಾನ ರಾತ್ರಿ 11.30ರ ಸುಮಾರಿಗೆ ಮರಳಿ ಲ್ಯಾಂಡ್ ಆಯಿತು. ಪ್ರಯಾಣಿಕರೊಬ್ಬರು ಹೊಗೆಯನ್ನು ಕಂಡು ಸಿಬ್ಬಂದಿಗೆ ತಿಳಿಸಿದ್ದಾರೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿಮಾನವನ್ನು ವಾಪಸ್ ತರಲಾಯಿತು. ಕೊಚ್ಚಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಹೊಗೆ ಕಾಣಿಸಿಕೊಂಡಿದೆ.
ನಂತರ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ವಿಮಾನವನ್ನು ಪರಿಶೀಲಿಸಲಾಯಿತು. ಈ ವಿಮಾನದಲ್ಲಿದ್ದ ಸುಮಾರು 170 ಪ್ರಯಾಣಿಕರನ್ನು ದುಬೈಗೆ ಮತ್ತೊಂದು ವಿಮಾನದಲ್ಲಿ ಕರೆದೊಯ್ಯಲಾಯಿತು.
ಏತನ್ಮಧ್ಯೆ, ಹವಾಮಾನ ವೈಪರೀತ್ಯದಿಂದಾಗಿ ಕೋಝಿಕ್ಕೋಡ್‍ಗೆ ತೆರಳಬೇಕಿದ್ದ ವಿಮಾನವನ್ನು ಬೇರೆಡೆಗೆ ಕಳಿಸಲಾಗಿದೆ. ದೋಹಾದಿಂದ ಕೋಝಿಕ್ಕೋಡ್‍ಗೆ ತೆರಳುತ್ತಿದ್ದ ಕತಾರ್ ಏರ್‍ವೇಸ್ ವಿಮಾನವನ್ನು ತಿರುವನಂತಪುರಕ್ಕೆ ಕಳಿಸಲಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಮುಂಜಾನೆ 3.10ರ ಸುಮಾರಿಗೆ ತಿರುವನಂತಪುರಂನಲ್ಲಿ ಇಳಿಯಿತು. ನಂತರ ವಿಮಾನವು ಸಂಜೆ 5.18 ರ ಸುಮಾರಿಗೆ ಕೋಝಿಕ್ಕೋಡ್‍ಗೆ ಹೊರಟಿತು. ವಿಮಾನದಲ್ಲಿ 131 ಪ್ರಯಾಣಿಕರಿದ್ದರು.