ತಿರುವನಂತಪುರಂ: ಕೊಯಮತ್ತೂರು ಕಾರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಕೇರಳದಿಂದ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದರು ಎಂದು ಎನ್ ಐಎ ಹೇಳಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಕೊಯಮತ್ತೂರು ಮೂಲದ ಮೊಹಮ್ಮದ್ ಇದ್ರಿಸ್ ಕೇರಳದಿಂದ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪತ್ತೆ ಮಾಡಿದೆ. ಮೊಹಮ್ಮದ್ ಇದ್ರಿಸ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಆಗಸ್ಟ್ 2 ರಂದು ಬಂಧಿಸಿತ್ತು.
ಸ್ಫೋಟದ ಹಿಂದಿನ ಮಾಸ್ಟರ್‍ಮೈಂಡ್ ಜಮೇಶಾ ಮುಬ್ಬಿನ್‍ನ ಆಪ್ತ ಸ್ನೇಹಿತ ಮೊಹಮ್ಮದ್ ಇದ್ರಿಸ್ ಬಾಂಬ್ ತಯಾರಿಕೆಯಲ್ಲಿ ನಿಪುಣನಾಗಿದ್ದ ಎಂದು ಎನ್‍ಐಎ ಪತ್ತೆ ಮಾಡಿದೆ. ಮಹಮ್ಮದ್ ಇದ್ರಾಸ್ ನ ಮೊಬೈಲ್ ಪೋನ್ ಪರಿಶೀಲನೆ ವೇಳೆ ಮಹತ್ವದ ಮಾಹಿತಿ ಸಿಕ್ಕಿದೆ. ಕಡಿಮೆ ಸಮಯದಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂಬ ಮಾಹಿತಿ ಪೋನ್ ನಿಂದ ಲಭಿಸಿದೆ.
ಈ ಸಂಚಿನಲ್ಲಿ ಮುಖ್ಯ ಮಾಸ್ಟರ್ ಮೈಂಡ್ ಜಮೇಶ ಮುಬ್ ಜೊತೆ ಸೇರಿ ಮಹಮ್ಮದ್ ಇದ್ರಿಸ್ ಭಾಗಿಯಾಗಿದ್ದನ್ನು ತನಿಖಾ ತಂಡ ಪತ್ತೆ ಮಾಡಿದೆ.ಆರೋಪಿಗಳಿಗೆ ಸ್ಫೋಟ ನಡೆಸಲು ಹಲವರು ಹಣಕಾಸಿನ ನೆರವು ನೀಡಿದ್ದಾರೆ. ಬಂಧನಕ್ಕೂ ಮುನ್ನ ಮೊಹಮ್ಮದ್ ಇದ್ರಿಸ್ ತನ್ನ ಕೆಲ ಸ್ನೇಹಿತರನ್ನು ಭೇಟಿ ಮಾಡಿದ್ದ ಎಂಬುದಕ್ಕೆ ತನಿಖಾ ಸಂಸ್ಥೆಗೆ ಸಾಕ್ಷ್ಯ ಸಿಕ್ಕಿದೆ.
ಅಕ್ಟೋಬರ್ 23, 2022 ರಂದು ಕೊಯಮತ್ತೂರಿನ ಕೋಟಾ ಸಂಗಮೇಶ್ವರ ದೇವಸ್ಥಾನದ ಬಳಿ ಕಾರೊಂದು ಸ್ಫೋಟಗೊಂಡಿತ್ತು. ಎನ್‍ಐಎ ಏಪ್ರಿಲ್ 20 ರಂದು ಪ್ರಕರಣದ ಮೊದಲ ಚಾರ್ಜ್‍ಶೀಟ್ ಸಲ್ಲಿಸಿತ್ತು. ಆರಂಭದಲ್ಲಿ ಆರು ಆರೋಪಿಗಳನ್ನು ಚಾರ್ಜ್ ಶೀಟ್ ನಲ್ಲಿ ಪಟ್ಟಿ ಮಾಡಲಾಗಿತ್ತು. ನಂತರ, ಜೂನ್ 2 ರಂದು ಎನ್ಐಎ ಇನ್ನೂ ಐದು ಜನರ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿತು. ಇನ್ನು ಕೆಲವರು ಪ್ರಕರಣದಲ್ಲಿ ಎನ್‍ಐಎ ನಿಗಾದಲ್ಲಿದ್ದಾರೆ.