ಉತ್ತರಪ್ರದೇಶ: ಗುರುವಾರ ಉತ್ತರಪ್ರದೇಶದ ಗೋರಖ್‌ಪುರ ಆಡಳಿತವು ಪೂರ್ವಾನುಮತಿ ಇಲ್ಲದೆ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಹಾರಿಸುವುದನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಉತ್ರರಪ್ರದೇಶದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಜನಿ ಕುಮಾರ್ ಸಿಂಗ್, ಇತ್ತೀಚೆಗೆ ಹೊರಡಿಸಿದ ಆದೇಶವು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ವಯಿಸುತ್ತದೆ ಮತ್ತು ಹೊರಡಿಸಿದ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಹಿಂದೂಸ್ತಾನ್ ಉರ್ವರಕ್, ರಸಾಯನ ಲಿಮಿಟೆಡ್, ಎಐಐಎಂಎಸ್, ರೈಲ್ವೇ ನಿಲ್ದಾಣದಿಂದ ನಿರ್ವಹಿಸಲ್ಪಡುವ ರಸಗೊಬ್ಬರ ಸ್ಥಾವರ ಮತ್ತು ಮಹಾಯೋಗಿ ಗೋರಖನಾಥ ದೇವಾಲಯದ 2 ಕಿ.ಮೀ ವ್ಯಾಪ್ತಿಯೊಳಗೆ ಡ್ರೋನ್‌ಗಳನ್ನು ಹಾರಿಸಲು ನಗರ ಮ್ಯಾಜಿಸ್ಟ್ರೇಟ್‌ನಿಂದ ಪೂರ್ವಾನುಮತಿ ಕಡ್ಡಾಯವಾಗಿದೆ. ವಿಶ್ವವಿದ್ಯಾನಿಲಯ, ಗೋರಖನಾಥ್ ಆರೋಗ್ಯಧಾಮ್ ಬಾಲಪರ್ ಸೋನ್ಬರ್ಸಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ಹಾರಾಟ ನಿಷೇಧ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡ್ರೋನ್ ಚಟುವಟಿಕೆ ನಡೆಸಲು ಯೋಜಿಸುವವರು ಕನಿಷ್ಠ ಏಳು ದಿನಗಳ ಮೊದಲು ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸೋಮವಾರ ಗೋರಖ್ನಾಥ ದೇವಸ್ಥಾನದ ಬಳಿ ಡ್ರೋನ್ ಪತ್ತೆಯಾದ ಬೆನ್ನಲ್ಲೇ ಆಡಳಿತ ಈ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.