ಉಡುಪಿ: ವ್ಯಾಪಕವಾಗಿ ಜನರಿಂದ ಸಸ್ಯನಾಶಕ ರಾಸಾಯನಿಕವಾಗಿ ಉಪಯೋಗಿಸಲಾಗುವ ಕೆಥ್ಲೋಡಿಮ್‌ನಿಂದ ಪುರುಷ ಸಂತಾನೋತ್ಪತ್ತಿಯ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುತ್ತಿದೆ ಎಂಬುದು ಮಣಿಪಾಲ ಮಾಹೆಯ ಕೆಎಂಸಿ ಕಾಲೇಜು ಹಾಗೂ ಮಂಗಳೂರಿನ ಯೆನೆಪೋಯ ಸಂಶೋಧನಾ ಕೇಂದ್ರ ಜಂಟಿಯಾಗಿ ನಡೆಸಿದ ಸಂಶೋಧನೆಗಳಿಂದ ಖಚಿತವಾಗಿದೆ.
ಈ ಜಂಟಿ ಸಂಶೋಧನೆಯಲ್ಲಿ ಕಂಡುಬಂದ ಫಲಿತಾಂಶವನ್ನು ಪ್ರಸಿದ್ಧ 'ಸಿಮೋಸ್ಪಿಯರ್' ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕ್ಲೆಥೋಡಿಮ್ ಆಧಾರಿತ ಸಸ್ಯನಾಶಕ (ಹರ್ಬಿಸೈಡ್)ವನ್ನು ಬಳಸುವ ಪುರುಷರ ಸಂತಾನೋತ್ಪತ್ತಿಯ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಅಲ್ಲದೇ ಭ್ರೂಣದ ಆರಂಭಿಕ ಬೆಳವಣಿಗೆಯ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಿಂದ ಗೊತ್ತಾಗಿದೆ ಎಂದು ಲೇಖನದಲ್ಲಿ ತಿಳಿಸಲಾಗಿದೆ.
ಕ್ಲೆಥೋಡಿಮ್‌ನ ದುಷ್ಪರಿಣಾಮಗಳನ್ನು ಪತ್ತೆ ಹಚ್ಚುವ ಪ್ರಯೋಗಕ್ಕಾಗಿ ಪ್ರಯೋಗಾಲಯದ ಇಲಿಗಳನ್ನು ಬಳಸಲಾಗಿದೆ. ಇದರ ಫಲಿತಾಂಶದಿಂದ ಕಂಡುಬಂದ ವಿಷಯವೆಂದರೆ ಹುಲ್ಲುಗಳ ನಿಯಂತ್ರಣಕ್ಕೆ ಬಳಸುವ ಈ ಸಾವಯವ ರಾಸಾಯನಿಕದಿಂದ ಪುರುಷ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ತೀವ್ರ ರೀತಿಯ ದುಷ್ಪರಿಣಾಮ ಹಾಗೂ ಪುರುಷರ ವೃಷಣದ ಗಾತ್ರ ಕಡಿಮೆಯಾಗುವುದು, ವೀರ್ಯದಲ್ಲಿ ಅಸಹಜತೆ ಸೇರಿದಂತೆ ಹಲವು ರೀತಿಯ ಪ್ರತಿಕೂಲ ಪ್ರಭಾವ ಕಂಡುಬಂದಿದೆ ಎಂದು ಹೇಳಲಾಗಿದೆ.
'ಕ್ಲೆಥೋಡಿಮ್ ನಮ್ಮಲ್ಲಿ ಸಾಮಾನ್ಯವಾಗಿ ಬಳಸುವ ಸಸ್ಯನಾಶಕ ರಾಸಾಯನಿಕವಾಗಿದ್ದು, ಇದರಿಂದ ಮನುಷ್ಯನಿಗೂ ತೊಂದರೆ ಇದೆ ಎಂಬುದು ಸಂಶೋಧನೆಯಿಂದ ಗೊತ್ತಾಗಿರುವುದು ಇದೇ ಮೊದಲು. ಮನುಷ್ಯನ ಸಂತಾನೋತ್ಪತ್ತಿ ಮೇಲೆ ಇದು ವ್ಯಾಪಕ ಪರಿಣಾಮ ಬೀರುವುದು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ' ಎಂದು ಕೆಎಂಸಿ ಮಣಿಪಾಲದ ಪ್ರಧಾನ ಸಂಶೋಧಕ ಡಾ.ಗುರುಪ್ರಸಾದ್ ಕಳ್ತೂರು ತಿಳಿಸಿದರು.
ಡಾ.ಗುರುಪ್ರಸಾದ್ ಮಾತನ್ನು ಬೆಂಬಲಿಸಿದ ಯೆನೆಪೋಯಾ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಡಾ.ಕೇಶವ ಪ್ರಸಾದ್, ಸಸ್ಯನಾಶಕಗಳು ಮಾನವ ಮೇಲೆ ಹಾಗೂ ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಇನ್ನಷ್ಟು ಸೂಕ್ಷ್ಮ ಸಂಶೋಧನೆ ನಡೆಯುವ ಅಗತ್ಯವಿದೆ ಎಂದರು.
ಕೆಎಂಸಿಯ ಸೆಂಟರ್ ಆಫ್ ಎಕ್ಸಲೆನ್ ಇನ್ ಕ್ಲಿನಿಕಲ್ ಎಂಬ್ರಿಯಾಲಜಿಯ ಮುಖ್ಯಸ್ಥ ಡಾ.ಸತೀಶ್‌ಕುಮಾರ್ ಅಡಿಗ ಅವರು ಸಹ ಇತ್ತೀಚಿನ ವರ್ಷಗಳಲ್ಲಿ ಪರಿಸರ ಮಾಲಿನ್ಯದಿಂದ ಮಾನವನ ವೀರ್ಯದ ಮೇಲಾಗುವ ಕಳವಳಕರ ಪರಿಣಾಮದ ಬಗ್ಗೆಯೂ ಚಿಂತೆ ವ್ಯಕ್ತಪಡಿಸಿದರು.
ಈ ಸಂಶೋಧನೆಯ ಸಹ ಲೇಖಕರಾಗಿರುವ ಅಮೆರಿಕದ ಮಯೋ ಕ್ಲಿನಿಕ್‌ನ ಸ್ಟೆಮ್ ಸೆಲ್ ಹಾಗೂ ಕ್ಯಾನ್ಸರ್ ತಜ್ಞ ಡಾ.ನಾಗರಾಜನ್ ಕಣ್ಣನ್ ಅವರು, ಸಸ್ಯನಾಶಕದ ಕುರಿತಂತ ಶೀಘ್ರದಲ್ಲೇ ಇನ್ನಷ್ಟು ಸಂಶೋದನೆ ನಡೆಯ ಬೇಕಾದ ಅಗತ್ಯತೆಯನ್ನು ಎತ್ತಿ ಹಿಡಿದಿದ್ದಾರೆ.
ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್, ಮಾಹೆಯ ಕುಲಪತಿ ಲೆ.ಜ. ಡಾ.ವೆಂಕಟೇಶ್ ಅವರು ತಂಡ ನಡೆಸಿದ ಸಂಶೋಧನೆಯಿಂದ ಹೊರಬಂದ ಮಾಹಿತಿ ಕುರಿತಂತೆ ಹರ್ಷ ವ್ಯಕ್ತಪಡಿಸಿದ್ದು, ಇದರಿಂದ ಮುಂದಿನ ತಲೆಮಾರಿನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಇನ್ನಷ್ಟು ಬೆಳಕು ಚೆಲ್ಲಲು ಸಾಧ್ಯವಾಗಲಿದೆ ಎಂದಿದ್ದಾರೆ.