ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ದಾರಾ ಸಿಂಗ್ ಚೌಹಾಣ್ ಮೇಲೆ ಭಾನುವಾರ ಶಾಯಿ ದಾಳಿ ನಡೆದಿದೆ. ಮೌ ಜಿಲ್ಲೆಯ ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾಗ ಯುವಕನೊಬ್ಬ ಮಸಿ ಎಸೆದಿದ್ದಾನೆ.
ಕಾಲೇಜ್ ವೊಂದರಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ಆದ್ರಿ ಚಟ್ಟಿ ಎಂಬಲ್ಲಿ ಚೌಹಾಣ್ ಅವರನ್ನು ಪಕ್ಷದ ಬೆಂಬಲಿಗರು ಸ್ವಾಗತಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಸಿಂಗ್ ಅತ್ರಿ ಹೇಳಿದ್ದಾರೆ.
ಚೌಹಾಣ್ ಕಾರಿನಿಂದ ಕೆಳಗಿಳಿದ ನಂತರ ಕೆಲವು ಬಿಜೆಪಿ ಕಾರ್ಯಕರ್ತರು ಅವರಿಗೆ ಹಾರ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮೋನು ಯಾದವ್ ಎಂದು ಗುರುತಿಸಲಾದ ವ್ಯಕ್ತಿ ಚೌಹಾಣ್ ಅವರ ಮುಖ ಮತ್ತು ಬಟ್ಟೆಯ ಮೇಲೆ ಇಂಕ್ ಎಸೆದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಘಟನೆಯ ನಂತರ ಚೌಹಾಣ್ ಅಲ್ಲಿಂದ ವಾಪಸ್ಸಾಗಿದ್ದಾರೆ. 2022 ರಲ್ಲಿ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಗೆದಿದ್ದ ಚೌಹಾಣ್, ಕಳೆದ ತಿಂಗಳು ಅವರು ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು.