ತ್ರಿಶೂರ್: ಗುರುವಾಯೂರು ದೇವಸ್ಥಾನದಲ್ಲಿ ತೆನೆತುಂಬಿಸುವ ‘ಇಲ್ಲಂ ನಿರಾ’ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಗುರುವಾಯೂರಪ್ಪನ ಅಂಗಳಕ್ಕೆ ಸುಮಾರು 1200 ಭತ್ತದ ತೆನೆಗಳನ್ನು ತರಲಾಯಿತು.
ಇಲ್ಲಂ ನಿರಾ ಸಮಾರಂಭಕ್ಕೆ ಸಂಬಂಧಿಸಿದಂತೆ ಹಲವು ಗಂಟೆಗಳ ಕಾಲ ದೇವಸ್ಥಾನದಲ್ಲಿ ದರ್ಶನ ನಿಯಂತ್ರಣ ಹೇರಲಾಗಿತ್ತು.
ಕೃಷಿ ಸಮೃದ್ಧಿಯನ್ನು ಸ್ವಾಗತಿಸಲು ಇಲ್ಲಂ ನಿರಾ ಸಮಾರಂಭವನ್ನು ನಡೆಸಲಾಗುತ್ತದೆ. ಈ ಉದ್ದೇಶಕ್ಕಾಗಿ ಸುಮಾರು 1200 ಕ್ಕೂ ಹೆಚ್ಚು ಭತ್ತದ ತೆನೆಗಳನ್ನು ಗುರುವಾಯೂರಪ್ಪನಿಗೆ ಮನಾಯತ್ ಮತ್ತು ಅಝಿಕಲ್ ಕುಟುಂಬಗಳ ಅನುವಂಶಿಕ ವಾರಸುದಾರರು ಮತ್ತು ಭಕ್ತರು ಅರ್ಪಿಸಿದರು. ಪೂರ್ವ ಗೋಪುರದಲ್ಲಿ ತೆನೆಗಳನ್ನು ಅರ್ಪಿಸಿ, ಅಕ್ಕಿ ಹಿಟ್ಟನ್ನು ಸಮರ್ಪಿಸಿ ಕೀರ್ಶಾಂತಿ ನಂಬೂದಿರಿ ಅವರು ತೀರ್ಥವನ್ನು ಸಿಂಪಡಿಸಿ ಶುದ್ಧೀಕರಿಸಿ ನಾಲಂಬಲಕ್ಕೆ ಏರಿಸಿದರು.
ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ನಂತರ ದೇಗುಲದ ಮುಂಭಾಗದ ಮಂಟಪದಲ್ಲಿ ಕದಿರುಗಳನ್ನು ಸಾಲಾಗಿ ಅರ್ಪಿಸಲಾಯಿತು. ದೇವಸ್ಥಾನದ ವತಿಯಿಂದ ಮೇಲ್ಶಾಂತಿ ಸರ್ವೈಶ್ವರ್ಯ ಪೂಜೆ ಹಾಗೂ ಲಕ್ಷ್ಮೀ ಪೂಜೆ ನೆರವೇರಿಸಿದರು. ಪೂಜಿಸಿದ ಕದಿರುಗಳನ್ನು ಭಕ್ತರಿಗೆ ಪ್ರಸಾದವಾಗಿ ನೀಡುವುದರೊಂದಿಗೆ ಸಮಾರಂಭವು ಮುಕ್ತಾಯವಾಯಿತು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಕದಿರುಗಳು ಬಂದಿತ್ತು. ಬುಧವಾರ ತ್ರಿಪುತರಿ ಸಮಾರಂಭ ನಡೆಯಲಿದೆ. ತ್ರಿಪುತರಿ ಸಮಾರಂಭವು ಕೊಯ್ಲು ಮಾಡಿದ ಭತ್ತದ ವಿಶೇಷ ನೈವೇದ್ಯವನ್ನು ತಯಾರಿಸಿ ಭಗವಂತನಿಗೆ ಅರ್ಪಿಸುವುದನ್ನು ಒಳಗೊಂಡಿರುತ್ತದೆ.