ಬೆಂಗಳೂರು: ಇಸ್ರೊ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಇಸ್ರೊ ವಿಜ್ಞಾನಿ ಅಶುತೋಷ್ ಸಿಂಗ್ ಅವರ ಕಾರಿಗೆ ಕಲ್ಲೆಸೆದು ಹಲ್ಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಆಗಸ್ಟ್ 24ರ ತಡರಾತ್ರಿ ನಡೆದಿರುವ ಘಟನೆ ಸಂಬಂಧ ದೂರು ಪಡೆಯಲಾಗಿದೆ. ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.
'ಇಸ್ರೊ ಸಂಸ್ಥೆಯಲ್ಲಿ ಯುವ ವಿಜ್ಞಾನಿ ಆಗಿರುವ ಅಶುತೋಷ್ ಸಿಂಗ್ ಅವರು ತಮ್ಮ ಕ್ವಿಡ್ ಕಾರಿನಲ್ಲಿ ರಾವತ್ತನಹಳ್ಳಿ ಮುಖ್ಯರಸ್ತೆಯಲ್ಲಿ ಹೊರಟಿದ್ದರು. ಇದೇ ವೇಳೆ ಅವರ ಕಾರಿಗೆ ಕಲ್ಲು ಎಸೆಯಲಾಗಿದೆ. ನಂತರ, ಕಾರು ಹಿಂಬಾಲಿಸಿದ್ದ ದುಷ್ಕರ್ಮಿಗಳು ಮಾರ್ಗಮಧ್ಯೆಯೇ ಹಲ್ಲೆಗೆ ಯತ್ನಿಸಿದ್ದರು. ಆದರೆ, ಯುವ ವಿಜ್ಞಾನಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ' ಎಂದು ತಿಳಿಸಿವೆ.
'ಯಾವ ಕಾರಣಕ್ಕೆ ಕಲ್ಲು ಎಸೆಯಲಾಗಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.