ನವದೆಹಲಿ: ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರ ಪರಿಸ್ಥಿತಿ ಕುರಿತು ಸಂಸತ್‌ನಲ್ಲಿ ಮಾತನಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಚಿಸಿ ಎಂದು 'ಇಂಡಿಯಾ' ಮೈತ್ರಿಕೂಟದ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬುಧವಾರ ಮನವಿ ಮಾಡಿದ್ದಾರೆ.
'ಇಂಡಿಯಾ'ದ ಅಂಗಪಕ್ಷಗಳ 31 ನಾಯಕರು ರಾಷ್ಟ್ರಪತಿ ಮುರ್ಮು ಅವರಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.
'ಮಣಿಪುರ ಕುರಿತು ಸಂಸತ್‌ನಲ್ಲಿ ಮಾತನಾಡುವ ಜೊತೆಗೆ, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ರೂಪುರೇಷೆ ಕುರಿತು ಪ್ರಧಾನಿ ವಿವರಿಸಬೇಕು' ಎಂಬ ಬೇಡಿಕೆಯನ್ನು ಮನವಿ ಪತ್ರ ಒಳಗೊಂಡಿದೆ.
ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಇತ್ತೀಚೆಗೆ ಮಣಿಪುರಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ ಸಂಸದರು ಹಾಗೂ ಮೈತ್ರಿಕೂಟದ ಸದಸ್ಯರು ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿ ಕುರಿತು ರಾಷ್ಟ್ರಪತಿ ಅವರಿಗೆ ವಿವರಿಸಿದರು' ಎಂದರು.
'ಮಣಿಪುರದಲ್ಲಿ ಹಿಂಸಾಚಾರ ಮುಂದುವರಿದಿರುವುದು, ಮಹಿಳೆಯರ ಮೇಲಿನ ದೌರ್ಜನ್ಯ, ಅವರನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ್ದರ ಕುರಿತು ವಿವರಿಸಿದೆವು 5 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದಿಂದಾಗಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಅಧಿಕ ಜನರು ನೆಲೆ ಕಳೆದುಕೊಂಡಿರುವ ಬಗ್ಗೆಯೂ ಮನವಿಪತ್ರದಲ್ಲಿ ವಿವರಿಸಿದ್ದೇವೆ' ಎಂದು ಖರ್ಗೆ ತಿಳಿಸಿದರು.
'ಹರಿಯಾಣದಲ್ಲಿ ನಡೆದಿರುವ ಕೋಮು ಸಂಘರ್ಷದ ಬಗ್ಗೆಯೂ ಪ್ರಸ್ತಾಪಿಸಿದ್ದೇವೆ. ಪ್ರಧಾನ ಮಂತ್ರಿ ಕಚೇರಿಯಿಂದ 100 ಕಿ.ಮೀ. ದೂರದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ' ಎಂದು ಆರೋಪಿಸಿದರು.
'ಇಂಡಿಯಾ' ನಾಯಕರಾದ ತಿರುಚ್ಚಿ ಶಿವ, ಕನಿಮೋಳಿ, ರಾಜೀವ್ ರಂಜನ್ ಲಲ್ಲನ್ ಸಿಂಗ್, ಅಧಿರ್ ರಂಜನ್ ಚೌಧರಿ, ಗೌರವ ಗೊಗೋಯಿ, ಸುಶೀಲ್‌ಕುಮಾರ್ ಗುಪ್ತ, ಸುಷ್ಮಿತಾ ದೇವ್, ಜಯಂತ್ ಸಿಂಗ್, ಮನೋಜ್ ಝಾ ನಿಯೋಗದಲ್ಲಿದ್ದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಣಿಪುರದಲ್ಲಿನ ಪರಿಸ್ಥಿತಿ ಕುರಿತು ಬುಧವಾರ ವಿವರಿಸಿದರು. 'ಇಂಡಿಯಾ' ನಾಯಕರು ಇದ್ದರು -ಪಿಟಿಐ ಚಿತ್ರಮಣಿಪುರ ಪರಿಸ್ಥಿತಿ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬುಧವಾರ ಮನವಿಪತ್ರ ಸಲ್ಲಿಸಿದ ಬಳಿಕ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 'ಇಂಡಿಯಾ' ನಾಯಕರು ಇದ್ದರು -ಪಿಟಿಐ ಚಿತ್ರಪ್ರಲ್ಹಾದ ಜೋಶಿಚರ್ಚೆಗೆ ಆಸಕ್ತಿ ಇಲ್ಲ
ವಿಪಕ್ಷಗಳ ವಿರುದ್ಧ ಬಿಜೆಪಿ ಟೀಕೆ 'ಮಣಿಪುರದಲ್ಲಿ ಹಿಂಸಾಚಾರ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸಲು ವಿರೋಧ ಪಕ್ಷಗಳಿಗೆ ಆಸಕ್ತಿ ಇಲ್ಲ. ವಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ಸರ್ಕಾರ ಸಿದ್ಧವಿದೆ ಆದರೆ ಅವರೇ ಚರ್ಚೆಯಿಂದ ಪಲಾಯನ ಮಾಡುತ್ತಿದ್ದಾರೆ' ಎಂದು ಬಿಜೆಪಿ ಬುಧವಾರ ಟೀಕಿಸಿದೆ. 'ಇಂಡಿಯಾ' ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿಪತ್ರ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿ ಈ ವಾಗ್ದಾಳಿ ನಡೆಸಿದೆ. 'ಸರ್ಕಾರ ಚರ್ಚೆಗೆ ಸಿದ್ಧ ಇದೆ. ಮಣಿಪುರಕ್ಕೆ ಭೇಟಿ ನೀಡಿರುವ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಲು ಸಿದ್ಧರಿದ್ದಾರೆ. ಆದರೆ ಅವರ ಸಮಸ್ಯೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ದೇಶದ ಜನರಿಗೂ ಅರ್ಥವಾಗುತ್ತಿಲ್ಲ' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸುದ್ದಿಗಾರರಿಗೆ ಹೇಳಿದರು. 'ವಿರೋಧ ಪಕ್ಷಗಳ ನಾಯಕರು ಮಣಿಪುರಕ್ಕೆ ಹೋಗುತ್ತಾರೆ. ಮನವಿಪತ್ರ ಸಲ್ಲಿಸಲು ರಾಷ್ಟ್ರಪತಿ ಭವನಕ್ಕೂ ಹೋಗುತ್ತಾರೆ. ಆದರೆ ಮಣಿಪುರ ವಿಷಯ ಕುರಿತು ಸಂಸತ್‌ನಲ್ಲಿ ನಡೆಯುವ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ' ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಟೀಕಿಸಿದರು. 'ಪ್ರಧಾನಿ ಮೋದಿ ಅವರು ಹೇಳಿಕೆ ನೀಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯಲ್ಲಿ ಯಾವುದೇ ತರ್ಕ ಇಲ್ಲ. ಸರ್ಕಾರವು ಸಾಮೂಹಿಕ ಹೊಣೆಗಾರಿಕೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಸಚಿವ ಅಮಿತ್ ಶಾ ಅವರು ಉತ್ತರಿಸಲು ಸಿದ್ಧರಿದ್ದಾರೆ' ಎಂದೂ ಅವರು ಹೇಳಿದರು.