ತಿರುವನಂತಪುರಂ: ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕೆಐಐಎಫ್‍ಬಿ-ಕಿಪ್ಭಿ) ಮೂಲಕ ರಾಜ್ಯ ಸರ್ಕಾರ ಇದುವರೆಗೆ 7,000 ಕೋಟಿ ರೂಪಾಯಿಗಳ ಆರ್ಥಿಕ ನೆರವಿನೊಂದಿಗೆ ಯೋಜನೆಗಳನ್ನು ಕಾರ್ಯಗತಗೊಳಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ವಿಧಾನಸಭೆಗೆ ತಿಳಿಸಿದರು.
ಎಡ ಸರಕಾರ ಅಧಿಕಾರಕ್ಕೆ ಬಂದ ನಂತರ ಕೆಐಐಎಫ್‍ಬಿ ಮೂಲಕ 15,635.50 ಕೋಟಿ ರೂ.ಗಳ 152 ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಇದಲ್ಲದೇ ಗಿಫ್ಟ್ ಸಿಟಿ ಭೂಸ್ವಾಧೀನಕ್ಕೆ ಭೂಸ್ವಾಧೀನ ಪೂಲ್ ಗೆ ಸೇರಿಸಿ 840 ಕೋಟಿ ರೂ. ವಿನಿಯೋಗಿಸಲಾಗಿದೆ. ಈ ಪೈಕಿ 68 ಬೃಹತ್ ಯೋಜನೆಗಳು ನಡೆಯುತ್ತಿದ್ದು, ಈ ಯೋಜನೆಗಳಿಗೆ 50 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ ಎಂದರು.
"ಇದುವರೆಗೆ, ಕಿಪ್ಭಿ ಮೂಲಕ ಇಲ್ಲಿಯವರೆಗೆ ಒಟ್ಟು 80,998.61 ಕೋಟಿ ಮೌಲ್ಯದ 1,057 ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಭೂಸ್ವಾಧೀನ ವಿಭಾಗದಲ್ಲಿ ಏಳು ಯೋಜನೆಗಳನ್ನು ಸೇರಿಸಲಾಗಿದೆ. ಅನುಮೋದಿತ ಯೋಜನೆಗಳ ಪೈಕಿ 603 ಟೆಂಡರ್‍ಗಳು ಪೂರ್ಣಗೊಂಡಿವೆ. ಈ ಪೈಕಿ 26,058.48 ಕೋಟಿ ರೂ.ಗಳ 552 ಯೋಜನೆಗಳು ಪೂರ್ಣಗೊಂಡು ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಸಿಎಂ ವಿಧಾನಸಭೆಗೆ ತಿಳಿಸಿದರು.
ಕೇಂದ್ರ ಪಕ್ಷಪಾತ:
ರಾಜ್ಯ ಸರ್ಕಾರದ ಬಗ್ಗೆ ಕೇಂದ್ರ ಪಕ್ಷಪಾತ ತೋರುತ್ತಿದೆ ಎಂದು ಮುಖ್ಯಮಂತ್ರಿ ಟೀಕಿಸಿದರು. ಕೇಂದ್ರವು ರಾಜ್ಯ ಸರ್ಕಾರವನ್ನು ಎಲ್ಲ ಕ್ಷೇತ್ರಗಳಲ್ಲಿ ನಿರ್ಲಕ್ಷಿಸುತ್ತಿದೆ ಎಂದರು. “ರಾಜ್ಯದ ಅಭಿವೃದ್ಧಿಯ ಕ್ರಮಗಳ ಬಗ್ಗೆ ಕೇಂದ್ರವು ನಕಾರಾತ್ಮಕ ನಿಲುವನ್ನು ತೆಗೆದುಕೊಳ್ಳುತ್ತಿದೆ. ಹಾಗಾಗಿ ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು. ಕಿಪ್ಭಿ ತೆಗೆದುಕೊಂಡ ಸಾಲವನ್ನು ರಾಜ್ಯದ ಸಾಲ ಎಂದು ಪರಿಗಣಿಸುವುದು ಕೇಂದ್ರದ ನೀತಿಯಾಗಿದೆ.
ಏತನ್ಮಧ್ಯೆ, ಕೇಂದ್ರದ ಅಡಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಂತಹ ಸಂಸ್ಥೆಗಳು ತೆಗೆದುಕೊಂಡ ಸಾಲವನ್ನು ಕೇಂದ್ರ ಸಾಲವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಕೇಂದ್ರವು ಇನ್‍ಫ್ರಾ ಪ್ರಾಜೆಕ್ಟ್‍ಗಳಿಗೆ ಸಾಲ ಪಡೆಯಬಹುದು, ಆದರೆ ರಾಜ್ಯ ಸರ್ಕಾರ ಅದನ್ನು ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನು ಸಹಿಸುವುದಿಲ್ಲ. ರಾಜ್ಯ ಸರಕಾರಕ್ಕೆ ಕೇಂದ್ರ ಪಕ್ಷಪಾತ ತೋರುತ್ತಿದೆ ಎಂದು ಕಿಡಿಕಾರಿದರು. ರಾಜ್ಯದ ಪಶ್ಚಿಮ ಕರಾವಳಿ ಕಾಲುವೆಯ ಜಲಮಾರ್ಗದ ಒಂದು ಭಾಗವನ್ನು ಚೇಟುವವರೆಗೆ ಡಿಸೆಂಬರ್‍ನೊಳಗೆ ಸಂಚಾರಕ್ಕೆ ಒಳಪಡಿಸಲಾಗುವುದು ಎಂದು ಪಿಣರಾಯಿ ವಿಧಾನಸಭೆಗೆ ತಿಳಿಸಿದರು.