ಕಣ್ಣೂರು: ನಾಲ್ವರು ದುಷ್ಕರ್ಮಿಗಳು ಒಮ್ನಿ ವ್ಯಾನ್‌ನಲ್ಲಿ ಬಂದು ನನ್ನನ್ನು ಅಪಹರಿಸಲು ಯತ್ನಿಸಿದರು ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನೀಡಿದ ದೂರು ಪೊಲೀಸರು ಮತ್ತು ಸ್ಥಳೀಯರನ್ನು ಕೆಲಕಾಲ ಗೊಂದಲಕ್ಕೆ ದೂಡಿದ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಆದರೆ, ಅಪಹರಣವು ಒಂದು ಕಟ್ಟುಕತೆ ಎಂಬುದು ಗೊತ್ತಾದ ಬಳಿಕ ಪೊಲೀಸರು ನಿಟ್ಟುಸಿರು ಬಿಡುವಂತಾಯಿತು.
ಈ ಘಟನೆ ನಿನ್ನೆ ಬೆಳಗ್ಗೆ 8.45ರ ಸುಮಾರಿಗೆ ಕಾಕ್ಕಡದ ಕುನ್ಹಿಪಲ್ಲಿ ಎಂಬಲ್ಲಿ ನಡೆದಿದೆ. ಬೆಳಗ್ಗೆ ಶಾಲೆಗೆ ಹೋಗುತ್ತಿದ್ದ ವೇಳೆ ಕಪ್ಪು ಬಣ್ಣದ ಓಮ್ನಿ ವ್ಯಾನ್‌ನಲ್ಲಿ ಬಂದ ನಾಲ್ವರ ಗ್ಯಾಂಗ್ ತನ್ನನ್ನು ಅಪಹರಿಸಲು ಯತ್ನಿಸಿದೆ ಎಂದು 15 ವರ್ಷದ ಬಾಲಕಿ ಪೊಲೀಸರಿಗೆ ದೂರು ನೀಡಿದಳು. ಕಾಕ್ಕಡದಿಂದ ಪಲ್ಲಿಕುನ್ನುಗೆ ಹೋಗುವ ರಸ್ತೆಯಲ್ಲಿ ಆಕೆಯನ್ನು ಅಪಹರಿಸಲು ಯತ್ನಿಸಿದ್ದರು ಎಂದು ಆಕೆ ತಿಳಿಸಿದಳು. ಅವರ ಕೈಯಿಂದ ಹೇಗೋ ಪಾರಾದೆ ಎಂದೂ ಹೇಳಿಕೊಂಡಿದ್ದಳು. ಇದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದರು.
ಆದರೆ, ಬಾಲಕಿ ಹೇಳಿದ ಸಮಯದಲ್ಲಿ ಯಾವುದೇ ಓಮ್ನಿ ವ್ಯಾನ್ ರಸ್ತೆಯಲ್ಲಿ ಹಾದು ಹೋಗಿರಲಿಲ್ಲ. ಕುನ್ಹಿಪಲ್ಲಿಯ ಯೂನಿಟಿ ಸೆಂಟರ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಓಮ್ನಿ ವ್ಯಾನ್ ಹಾದು ಹೋಗಿರುವುದು ಸ್ಪಷ್ಟವಾಗಿದೆ ಎಂದು ಎಸಿಪಿ ಟಿ.ಕೆ.ರತ್ನಕುಮಾರ್ ತಿಳಿಸಿದ್ದಾರೆ.
ಪೊಲೀಸರು ಬೆಳಗ್ಗೆ 8ರಿಂದ 11.30ರವರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಒಂದು ಓಮ್ನಿ ವ್ಯಾನ್ ಮಾತ್ರ ಕುನ್ಹಿಪಲ್ಲಿಯ ಮೂಲಕ ಹಾದು ಹೋಗಿತ್ತು. ಆದರೆ, ಆ ವಾಹನ ಪಲ್ಲಿಕುನ್ನುಗೆ ಹೋಗುವ ರಸ್ತೆಯನ್ನು ಪ್ರವೇಶಿಸದೆ ನೇರವಾಗಿ ಹೋಗಿತ್ತು. ನಂತರ ಆ ವಾಹನವು ಸಮೀಪದ ಶಾಲೆಗೆ ಸೇರಿದ್ದು ಎಂಬುದು ಸ್ಪಷ್ಟವಾಯಿತು. ಹುಡುಗಿ ಹೇಳಿದ ಹಾಗೆ ಈ ವಾಹನದ ಬಣ್ಣ ಕಪ್ಪಾಗಿರಲಿಲ್ಲ. ಬಳಕ ಆ ವಾಹನದ ಚಾಲಕನ ಹೇಳಿಕೆಯನ್ನೂ ಪೊಲೀಸರು ಪಡೆದುಕೊಂಡರು.
ಬಳಿಕ ತನಿಖಾ ತಂಡ ವಿದ್ಯಾರ್ಥಿನಿಯನ್ನು ವಿಚಾರಣೆ ನಡೆಸಿದಾಗ ತಾನು ಅಪಹರಣದ ಬಗ್ಗೆ ಕಟ್ಟುಕತೆ ಕಟ್ಟಿದ್ದಾಗಿ ಹೇಳಿಕೊಂಡಿದ್ದಾಳೆ. ಶಾಲೆಗೆ ಹೋಗಲು ಇಷ್ಟವಿಲ್ಲದಿದ್ದರಿಂದ ಈ ನಾಟಕವಾಡಿದೆ ಎಂದು ಹೇಳಿಕೊಂಡಿದ್ದಾಳೆ.