ತಿರುವನಂತಪುರ: ಏಲಿಯನ್ ಮತ್ತು ಹಾರುವ ತಟ್ಟೆಗಳ ಬಗ್ಗೆ ದಶಕಗಳಿಂದಲೂ ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇವೆ. ಕೆಲವರು ಇವೆರಡನ್ನೂ ತಾವು ಕಂಡಿರುವುದಾಗಿ ಹೇಳಿದರೆ, ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ ಇನ್ನು ಕೆಲವರು. ಆದರೂ ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ಕಾಣಿಸಿಕೊಂಡಿವೆ.
ಈ ಯುಎಫ್ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ಇದರ ಬಗ್ಗೆ ಹೆಚ್ಚು ಮಾತುಗಳು ಕೇಳಿಬರುತ್ತಿರುತ್ತವೆ. ಆದರೆ ಈಗ ಭಾರತದಲ್ಲೂ ಇಂಥದ್ದೊಂದು ಮಾತು ಕೇಳಿಬಂದಿದೆ. ಯುಎಫ್ಒ ನೋಡಿದ್ದಾಗಿ ಮಲಯಾಳಂ ನಟಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಅವರು ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮಲಯಾಳಂ ನಟಿ ದಿವ್ಯ ಪ್ರಭಾ ಅವರು ವಿಮಾನ ಪ್ರಯಾಣದ ವೇಳೆ ಆಗಸದಲ್ಲಿ ವಿಚಿತ್ರ ವಸ್ತು ಒಂದನ್ನು ನೋಡಿದ್ದಾಗಿ ಹೇಳಿದ್ದಾರೆ. ಇದನ್ನು ಇನ್ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. ಮುಂಬೈನಿಂದ ಕೊಚ್ಚಿಗೆ ಬರುವಾಗ ಇಂಥದ್ದೊಂದು ವಿದ್ಯಾಮಾನ ನಡೆದಿದ್ದಾಗಿ ದಿವ್ಯ ಪ್ರಭಾ ಹೇಳಿದ್ದಾರೆ.
ನಾನು ಇಂದು ಮುಂಬೈನಿಂದ ಕೊಚ್ಚಿಗೆ ಬರುತ್ತಿದ್ದೆ. ವಿಮಾನವು ಕೊಚ್ಚಿಗೆ ಲ್ಯಾಂಡ್ ಆಗುವ ಒಂದು ಗಂಟೆಗೂ ಮುನ್ನ ನಾನು ಆಕಾಶದ ಫೋಟೋಗಳನ್ನು ತೆಗೆದುಕೊಂಡೆ. ಈ ವೇಳೆ ದಿಢೀರನೇ ನನ್ನ ಫೋನ್ ಕ್ಯಾಮೆರಾದಲ್ಲಿ ಏನೋ ಒಂದನ್ನು ನೋಡಿದೆ. ಅದೇನು ಅಂತಾ ನೋಡಿದಾಗ ದೂರದಲ್ಲಿ ಮೋಡಗಳ ನಡುವೆ ಒಂದು ವಿಚಿತ್ರವಾದ ಫ್ಲೈಯಿಂಗ್ ಆಬ್ಜೆಕ್ಟ್ ಹಾರುತ್ತಿರುವುದಾಗಿ ಕಂಡೆ. ಅದು ಕೆಲವೇ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು. ಅದು ಏನೆಂದು ನನಗೆ ಕಂಡುಹಿಡಿಯಲಾಗುತ್ತಿಲ್ಲ. ಅದು ಉಎಫ್ಒ ಆಗಿರಬಹುದಾ ಎಂದು ಪ್ರಭಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇದು ತುಂಬಾ ಎತ್ತರದಲ್ಲಿ ಕಂಡುಬಂದಿದ್ದರೆ, ಬಹುಶಃ ಅದು ವಾತಾವರಣದಲ್ಲಿ ತೇಲುತ್ತಿರುವ ಕೆಲವು ಬಾಹ್ಯಾಕಾಶ ಅವಶೇಷಗಳಾಗಿರಬಹುದು. ಅಲ್ಲದೆ, ಅನ್ಯಗ್ರಹ ಜೀವಿಯೂ ಆಗಿರಬಹುದೆಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ UFO ಚಟುವಟಿಕೆಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ತಮಿಳುನಾಡಿನ ಮಾಜಿ ಡಿಜಿಪಿ ಒಬ್ಬರು ಸಹ ಇದೇ ರೀತಿಯ ಒಂದು ವಿಚಿತ್ರ ಆಬ್ಜೆಕ್ಟ್ ಚಿತ್ರ ಸೆರೆಹಿಡಿದಿದ್ದರು ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಹೀಗೆ ಹಲವಾರು ಕಾಮೆಂಟ್‌ಗಳು ದಿವ್ಯ ಪ್ರಭಾ ಅವರು ಮಾಡಿರುವ ಇನ್ಸ್ಟಾಗ್ರಾಂ ಪೋಸ್ಟ್ಗೆ ಹರಿದುಬಂದಿದೆ.