ನವದೆಹಲಿ:ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಾಡಿದ್ದಾರೆ ಎನ್ನಲಾದ ಫ್ಲೈಯಿಂಗ್ ಕಿಸ್ ಚರ್ಚೆಗೆ ಗ್ರಾಸವಾಗಿದೆ.
ಘಟನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಸಿನ ಚರ್ಚೆ ಸಾಗಿದ್ದು, ಮೈಕ್ರೋ ಬ್ಲಾಗಿಂಗ್ ತಾಣ 'ಎಕ್ಸ್'ನಲ್ಲಿ #FlyingKiss ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಪರ-ವಿರೋಧದ ಚರ್ಚೆಗಳು ಜೋರಾಗಿಯೇ ಸಾಗಿವೆ. ಮೀಮ್‌ಗಳು ಹರಿದಾಡುತ್ತಿವೆ.
ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ಮಾಡಿಲ್ಲ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ರಾಹುಲ್ ಗಾಂಧಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.
'ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿದ್ದನ್ನು ನಾನು ನೋಡಿಲ್ಲ' ಎನ್ನುವ ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ಹೇಳಿಕೆಯನ್ನು ಪೋಸ್ಟ್ ಮಾಡಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೈಜ ವಿಷಯವನ್ನು ಮರೆಮಾಚಲು ಬಿಜೆಪಿ ಫ್ಲೈಯಿಂಗ್ ಕಿಸ್ ವಿವಾದ ಹುಟ್ಟು ಹಾಕಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.