ನವದೆಹಲಿ: ಮೈಕ್ರೊ ಬ್ಲಾಗಿಂಗ್ ವೇದಿಕೆ 'ಎಕ್ಸ್' (ಟ್ವಿಟರ್) ಯಲ್ಲಿ ಹಲವು ಪ್ರಮುಖ ನಾಯಕರ ಖಾತೆಯ ಖಾತ್ರಿಗೆ ನೀಡಲಾಗಿದ್ದ ಟಿಕ್‌ಗಳು ಮಾಯವಾಗಿದೆ.
'ಭಾರತದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿನ ಪ್ರೊಫೈಲ್ ಚಿತ್ರದ ಜಾಗದಲ್ಲಿ ತ್ರಿವರ್ಣ ಧ್ವಜವನ್ನು ಹಾಕುವ ಮೂಲಕ ನಮ್ಮೆಲ್ಲರ ಹೆಮ್ಮೆಯ ರಾಷ್ಟ್ರದಲ್ಲಿರುವವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸೋಣ' ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಹಲವು ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಮ್ಮ ಪ್ರೊಫೈಲ್ ಚಿತ್ರವನ್ನು ಬದಲಿಸಿದ್ದರು.
ಪ್ರಧಾನಿ ಕರೆಯಂತೆ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಹಾಗೂ ವಿವಿಧ ಸಂಸ್ಥೆಗಳು ತಮ್ಮ ಪ್ರೊಫೈಲ್ ಚಿತ್ರದ ಜಾಗದಲ್ಲಿ ತ್ರಿವರ್ಣ ಧ್ವಜವನ್ನು ಹಾಕಿಕೊಂಡಿದ್ದಾರೆ.
ಆದರೆ 'ಎಕ್ಸ್' ಖಾತೆಯಲ್ಲಿ ಯಾರ ಪ್ರೊಫೈಲ್ ಚಿತ್ರಗಳು ಬದಲಾಗಿವೆಯೋ ಅವರಿಗೆ ನೀಡಲಾಗಿದ್ದ ಗೋಲ್ಡನ್ ಹಾಗೂ ಬ್ಲೂ ಟಿಕ್‌ಗಳು ಮಾಯವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಖಾತೆಯ ಖಾತ್ರಿಗಾಗಿ ನೀಡಲಾಗುವ ಗುರುತು ಇದಾಗಿದೆ. ಇದರಲ್ಲಿ ನೀಲಿ ಹಾಗೂ ಹೊಂಬಣ್ಣದ ಟಿಕ್‌ಗಳಿವೆ.
ಎಕ್ಸ್‌ನ ಮಾನದಂಡದಂತೆ ಪ್ರಮುಖ ನಾಯಕರಿಗೆ ಹಾಗೂ ಸಂಸ್ಥೆಗಳ ಖಾತೆಗಳನ್ನು ಮರುಪರಿಶೀಲಿಸುವ ಕಾರ್ಯ ನಡೆದಿದ್ದು, ಖಾತೆ ಖಾತ್ರಿಯಾದರೆ ಟಿಕ್‌ಗಳನ್ನು ಮರಳಿ ನೀಡಲಾಗುವುದು ಎಂದೆನ್ನಲಾಗಿದೆ.
ಖಾತೆ ಖಾತ್ರಿಯ ಟಿಕ್ ಕಳೆದುಕೊಂಡವರಲ್ಲಿ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರಿಗೆ ಸೇರಿದ ಖಾತೆಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೂ ತಮ್ಮ ಪ್ರೊಫೈಲ್ ಚಿತ್ರವನ್ನು ತ್ರಿವರ್ಣವಾಗಿ ಬದಲಿಸಿದ್ದಾರೆ. ಆದರೆ ಅವರಿಗೆ ಎಕ್ಸ್ ನೀಡಿರುವ ಬೂದು (grey) ಬಣ್ಣದ ಟಿಕ್ ಹಾಗೇ ಉಳಿದಿದೆ.