ಬೆಂಗಳೂರು: ವೈಯಕ್ತಿಕ ಹಣಕಾಸು ಕ್ಷೇತ್ರ, ಆಸ್ತಿ ನೋಂದಣಿ, ಮುದ್ರಾಂಕ ಶುಲ್ಕ ಸೇರಿ ಹಲವು ಕ್ಷೇತ್ರಗಳಲ್ಲಿ ಅಕ್ಟೋಬರ್ 1ರಿಂದ ಕೆಲ ಬದಲಾವಣೆಗಳು ಆಗಲಿವೆ. ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಬದಲಾವಣೆಗಳು ಜಾರಿಗೆ ಬರಲಿವೆ. ಆಧಾರ್ ಕಾರ್ಡ್ನಲ್ಲಿ ವಿವರ ಬದಲಾವಣೆ, ಮ್ಯೂಚುವಲ್ ಫಂಡ್, ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಟಿಸಿಎಸ್ ನಿಯಮಗಳು, ಎರಡು ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ, ಜನನ-ಮರಣ ಪ್ರಮಾಣಪತ್ರ ಸಲ್ಲಿಕೆ ಸೇರಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಪ್ರಮುಖ ಬದಲಾವಣೆಗಳು ಇಲ್ಲಿ ರ್ಚಚಿಸಲಾಗಿದೆ.
ಆಧಾರ್ ಜೋಡಣೆ: ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಠೇವಣಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಸೆಪ್ಟೆಂಬರ್ 30ರಂದು ಗಡುವು ನೀಡಲಾಗಿದೆ. ಇಲ್ಲದಿದ್ದಲ್ಲಿ ಈ ಹೂಡಿಕೆಗಳನ್ನು ಫ್ರೀಜ್ ಮಾಡುವ ಸಂಭವವಿದೆ.
ಸ್ಥಿರಾಸ್ತಿ ಖರೀದಿ ದುಬಾರಿ: ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಹಲವು ಮಾರ್ಗಗಳನ್ನು ಹುಡುಕುತ್ತಿದ್ದು, ರಾಜ್ಯದಲ್ಲಿ ಸ್ಥಿರಾಸ್ತಿಗಳ ಬೆಲೆ ಅಕ್ಟೋಬರ್ನಿಂದ ಹೆಚ್ಚಾಗಲಿದೆ. ಅ.1ರಿಂದ ಹೊಸ ದರ ಜಾರಿಗೆ ಬರಲಿದೆ. ಮಾರ್ಗಸೂಚಿ ಬೆಲೆ ಶೂನ್ಯದಿಂದ ಶೇ.90ರ ತನಕ ಹೆಚ್ಚಳವಾಗುತ್ತದೆ. ಒಟ್ಟಾರೆ ಸರಾಸರಿ ಶೇ.30 ರಷ್ಟು ಹೆಚ್ಚಳವಾಗುತ್ತದೆ. ಐದು ವರ್ಷಗಳ ನಂತರ ಮಾರ್ಗಸೂಚಿ ಬೆಲೆಗಳನ್ನು ಸರ್ಕಾರ ಪರಿಷ್ಕರಣೆ ಮಾಡುತ್ತಿದೆ. ರಾಜ್ಯದ ಎಲ್ಲ ಉಪ ನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ಅಂದಾಜು ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಈ ವರ್ಷ ನೋಂದಣಿ ಇಲಾಖೆಯಿಂದ 25 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹಣೆ ಗುರಿ ನಿಗದಿಯಾಗಿದೆ.
2,000 ರೂ. ನೋಟು ಬದಲಿಸಿ: 2,000 ರೂಪಾಯಿ ಮುಖಬೆಲೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನ ಎಂದು ರಿಸರ್ವ್ ಬ್ಯಾಂಕ್ ಘೋಷಣೆ ಮಾಡಿದೆ. ಈ ಗಡುವು ವಿಸ್ತರಣೆಯಾಗುವ ಸಾಧ್ಯತೆ ಕಡಿಮೆ. ಅ.1ರಿಂದ 2,000 ರೂ. ನೋಟುಗಳು ಅಮಾನ್ಯಗೊಳ್ಳಲಿವೆ.
ಹೊಸ ಟಿಸಿಎಸ್ ನಿಯಮಗಳು ಅನ್ವಯ: ಕ್ರೆಡಿಟ್ ಕಾರ್ಡ್ಗಳ ಮೇಲಿನ ಸಾಗರೋತ್ತರ ವೆಚ್ಚಗಳು 7 ಲಕ್ಷ ರೂ. ದಾಟಿದರೆ ಬಳಕೆದಾರರು ಅ.1 ರಿಂದ ಶೇ. 20 ಟಿಸಿಎಸ್ ವ್ಯಾಪ್ತಿಗೆ ಒಳಪಡುತ್ತಾರೆ. ವೈದ್ಯಕೀಯ ಅಥವಾ ಶೈಕ್ಷಣಿಕ ಉದ್ದೇಶಗಳಿಗಾಗಿ ಖರ್ಚು ಮಾಡಿದರೆ ಶೇ. 5 ಟಿಸಿಎಸ್ ವಿಧಿಸಲಾಗುತ್ತದೆ. ವಿದೇಶಿ ಶಿಕ್ಷಣಕ್ಕಾಗಿ ಸಾಲ ಪಡೆಯುವವರಿಗೆ 7 ಲಕ್ಷದ ವರೆಗೆ ಶೇ.0.5 ಮಾತ್ರ ಟಿಸಿಎಸ್ ವಿಧಿಸಲಾಗುತ್ತದೆ.
ಡಿಮ್ಯಾಟ್ ಖಾತೆಗೆ ನಾಮ ನಿರ್ದೇಶನ: ಡಿಮ್ಯಾಟ್ ಖಾತೆದಾರರು ಫಲಾನುಭವಿಗಳ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅಸ್ತಿತ್ವದಲ್ಲಿರುವ ಎಲ್ಲ ಮ್ಯೂಚುಯಲ್ ಫಂಡ್ ಖಾತೆಗಳಿಗೆ ನಾಮಿನಿ ನೇಮಕ ಮಾಡಲು ಸೆ.30 ಕೊನೆಯ ಗಡುವಾಗಿದೆ. ಅದರ ನಂತರ ಈ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಜನನ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯ: ಸರ್ಕಾರಿ ಉದ್ಯೋಗಗಳಿಗೆ ಜನನ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಹೊಸ ಆಧಾರ್ ಕಾರ್ಡ್ ಪಡೆಯಲು, ಸರ್ಕಾರಿ ಉದ್ಯೋಗಕ್ಕೆ ಸೇರಲು, ಹಣಕಾಸು ವಿಷಯಗಳ ಹೊರತಾದ ಇತರ ಸರ್ಕಾರಿ ಕಾರ್ಯಗಳಿಗೆ ಇನ್ನು ಜನನ ಪ್ರಮಾಣಪತ್ರ ಮಾತ್ರ ದಾಖಲೆಯಾಗಲಿದೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯ್ದೆ- 2023 ಅಕ್ಟೋಬರ್ 1ರಂದು ಜಾರಿಗೆ ಬರಲಿದೆ.