ನವದೆಹಲಿ: ಭಾರತದಲ್ಲಿರುವ ಅಮೇರಿಕಾ ಎಂಬಸಿ ನೀಡುವ ವಲಸೆಯೇತರ ವೀಸಾ ವಿಭಾಗದಲ್ಲಿ 1 ಮಿಲಿಯನ್ ಸಂಖ್ಯೆಯನ್ನು ದಾಟಿದೆ.
ಭಾರತಕ್ಕೆ ಅಮೇರಿಕಾ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟಿ, ಒಂದು ದಶಲಕ್ಷದ ವೀಸಾವನ್ನು, ಎಂಐಟಿಯಲ್ಲಿರುವ ತಮ್ಮ ಪುತ್ರನ ಪದವಿ ಕಾರ್ಯಕ್ರಮದಲ್ಲಿ ಭಾಗಿಯಾವುದಕ್ಕೆ ಅಮೇರಿಕಾಗೆ ತೆರಳಲಿರುವ ದಂಪತಿಗೆ ಹಸ್ತಾಂತರಿಸಿದರು. ಈ ಮೂಲಕ 2023 ರಲ್ಲಿ ಅಮೇರಿಕಾ, ಭಾರತೀಯರಿಗೆ ನೀಡಲಾಗುವ ವಲಸೆಯೇತರ ವೀಸಾದ ಸಂಖ್ಯೆ 1 ಮಿಲಿಯನ್ ದಾಟಿದೆ.
ಇದೇ ವೇಳೆ ಭಾರತೀಯರು ಪಡೆಯುವ ಅಮೇರಿಕಾದ ವಲಸೆಯೇತರ ವೀಸಾ ಕುರಿತ ಕೆಲವು ಅಚ್ಚರಿಯ ಹಾಗೂ ಮುಖ್ಯವಾದ ಅಂಕಿ-ಅಂಶಗಳನ್ನು ಅಮೇರಿಕಾ ಮಿಷನ್ ಹಂಚಿಕೊಂಡಿದೆ.
ಜಾಗತಿಕವಾಗಿ ಎಲ್ಲಾ ರೀತಿಯ ಅಮೇರಿಕಾದ ವೀಸಾಗಳನ್ನು ಕೇಳಿ ಬರುವ ಅರ್ಜಿಗಳ ಪೈಕಿ ಭಾರತದ್ದು ಶೇ.10 ರಷ್ಟು ಅರ್ಜಿಗಳಿರುತ್ತವೆ. ವಿದ್ಯಾರ್ಥಿ ವೀಸಾ ಶೇ.20 ರಷ್ಟಿದ್ದರೆ, ಎಲ್ಲಾ ರೀತಿಯ ಹೆಚ್&ಎಲ್ ವರ್ಗ (ಉದ್ಯೋಗದ) ವೀಸಾ ಅರ್ಜಿಗಳು ಶೇ.65 ರಷ್ಟಿದೆ ಎಂದು ಅಮೇರಿಕಾ ಹೇಳಿದೆ.
2019 ರಲ್ಲಿ ಕೋವಿಡ್ ಅವಧಿಗೂ ಮುನ್ನ ಹಾಗೂ 2022 ಕ್ಕೆ ಹೋಲಿಕೆ ಮಾಡಿದರೆ, ಈಗ ಪ್ರಕ್ರಿಯೆಗೆ ಒಳಪಟ್ಟಿರುವ ಅಮೇರಿಕಾ ವೀಸಾ ಅರ್ಜಿಗಳ ಪ್ರಮಾಣ ಶೇ.20 ರಷ್ಟು ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ 10 ಅರ್ಜಿಗಳು ಅಮೇರಿಕಾ ವೀಸಾ ಕೇಳಿ ಬಂದಿದ್ದರೆ ಅದರಲ್ಲಿ 1 ಭಾರತದ್ದಾಗಿರುತ್ತದೆ ಎಂದು ಎಂಬಸಿ ಮಾಹಿತಿ ನೀಡಿದೆ.
ಭಾರತೀಯರಿಗೆ ವೀಸಾ ಹಸ್ತಾಂತರಿಸಿ ಮಾತನಾಡಿದ ಅಮೇರಿಕ ರಾಯಭಾರಿ, "ನಾನು ಇಂದು ಸಂತೋಷವಾಗಿದ್ದೇನೆ, ಭಾರತ, ಭಾರತೀಯರು ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ವೀಸಾಗಳ ಪ್ರಕ್ರಿಯೆಯನ್ನು ಉತ್ತಮಗೊಳಿಸೋಣ ಎಂದು ಹೇಳಿದ್ದಾರೆ ನಾವು ನಮ್ಮ ವ್ಯವಸ್ಥೆಯನ್ನು ಬದಲಾಯಿಸಿದ್ದೇವೆ, ನಾವು ಕಠಿಣ ಮತ್ತು ಚುರುಕಾಗಿ ಕೆಲಸ ಮಾಡಿದ್ದೇವೆ ಮತ್ತು ಈ ವರ್ಷ ನಾವು ಒಂದು ಮಿಲಿಯನ್ ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ" ಎಂದು ಹೇಳಿದ್ದಾರೆ.