ನವದೆಹಲಿ: ಮಹತ್ವದ ಘೋಷಣೆಯಲ್ಲಿ ದೇಶೀಯ ವಾಯುಪಡೆ ಕ್ಷೇತ್ರದ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐಎಎಫ್ 100 ದೇಶೀಯ ನಿರ್ಮಿತ ಎಲ್ ಸಿಎ ಮಾರ್ಕ್ 1ಎ ಫೈಟರ್ ಜೆಟ್ ಗಳನ್ನು ಖರೀದಿಸುವುದಾಗಿ ಹೇಳಿದೆ.
ಸ್ಪೇನ್ ನಲ್ಲಿ ಮೊದಲ ಸಿ-295 ಸೇನಾ ಸಾಗಣೆ ವಿಮಾನವನ್ನು ಸ್ವೀಕರಿಸಿ ಮಾತನಾಡಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಈ ಘೋಷಣೆ ಮಾಡಿದ್ದಾರೆ.
ವಾಯುಪಡೆಯಲ್ಲಿ ಮಿಗ್ ಸರಣಿಯ ವಿಮಾನಗಳ ಬದಲಿಗೆ ಬಳಕೆ ಮಾಡುವುದಕ್ಕಾಗಿ ಎಲ್ ಸಿಎಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಮಿಗ್ ಸರಣಿಯ ವಿಮಾನಗಳು ಹಳೆಯದಾಗುತ್ತಿದ್ದು, ನಮ್ಮ ಭತ್ತಳಿಕೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಎಲ್ ಸಿಎ ಶ್ರೇಣಿ ಯುದ್ಧವಿಮಾನಗಳು ಇರುವುದು ಅಗತ್ಯವಾಗಿದೆ. ಆದ್ದರಿಂದ, ನಾವು ಈಗಾಗಲೇ ಒಪ್ಪಂದ ಮಾಡಿಕೊಂಡಿರುವ 83 LCA ಮಾರ್ಕ್ 1A ಗಳನ್ನು ಹೊರತುಪಡಿಸಿ, ನಾವು ಸುಮಾರು 100 ವಿಮಾನಗಳ ಖರೀದಿಗೆ ಯೋಜಿಸುತ್ತಿದ್ದೇವೆ" ಎಂದು ಏರ್ ಚೀಫ್ ಮಾರ್ಷಲ್ ಚೌಧರಿ ಏರ್‌ಬಸ್ ವಿಮಾನ ತಯಾರಿಕಾ ಸೌಲಭ್ಯದಲ್ಲಿ ಎಎನ್ಐ ಗೆ ಹೇಳಿದ್ದಾರೆ.