ತಿರುವನಂತಪುರಂ: 2022ರಲ್ಲಿ ಕೇರಳದಲ್ಲಿ ವರದಿಯಾದ ಒಟ್ಟು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಹೆಚ್ಚಿನ ಅಪರಾಧಗಳು ಅವರ ಮನೆಗಳಲ್ಲೇ ನಡೆದಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ಸಮಿತಿಯು ಸಂಗ್ರಹಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ವರದಿಯಲ್ಲಿ ಕಾಣಿಸಿಕೊಂಡಿರುವ ಆಶ್ಚರ್ಯಕರ ಅಂಕಿಅಂಶಗಳು, ಸಂತ್ರಸ್ಥ ಮಕ್ಕಳಿಗೆ ಅವರ ಮನೆಗಳು ಸುರಕ್ಷಿತವಾಗಿಲ್ಲ ಎಂದು ಸೂಚಿಸಿವೆ.
2022-23ರ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಾರ್ಷಿಕ ವರದಿಯ ಪ್ರಕಾರ, 2022ರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ವರದಿಯಾದ ಒಟ್ಟು 4,582 ಪ್ರಕರಣಗಳಲ್ಲಿ 1,004 ಘಟನೆಗಳು ಗೃಹ ದೌರ್ಜನ್ಯವೆಂದು ಗುರುತಿಸಲಾಗಿದೆ.
722 ಪ್ರಕರಣಗಳಲ್ಲಿ ಆರೋಪಿಗಳ ಮನೆಗಳು ಅಪರಾಧ ನಡೆದ ಸ್ಥಳಗಳಾಗಿದ್ದರೆ, 648 ಪ್ರಕರಣಗಳಲ್ಲಿ ವಿವಿಧ ಸಾರ್ವಜನಿಕ ಸ್ಥಳಗಳಾಗಿವೆ.
ವರದಿಯಾದ 4,582 ಪೋಕ್ಸೊ ಪ್ರಕರಣಗಳಲ್ಲಿ ಅಪರಾಧ ನಡೆದ ಸ್ಥಳಗಳನ್ನು ವಿಶ್ಲೇಷಿಸಿದಾಗ, 1004 ಪ್ರಕರಣಗಳಲ್ಲಿ ಮಕ್ಕಳು ತಮ್ಮ ಮನೆಯಲ್ಲಿಯೇ ದೌರ್ಜನ್ಯಕ್ಕೆ ಒಳಗಾಗಿರುವುದು ಕಂಡುಬಂದಿದೆ ಎಂದು ಅದು ಹೇಳಿದೆ.
ಮಕ್ಕಳು ಶಾಲೆಗಳಲ್ಲಿ (133 ಪ್ರಕರಣಗಳು), ವಾಹನಗಳಲ್ಲಿ (102 ಪ್ರಕರಣಗಳು), ಹೋಟೆಲ್‍ಗಳು/ಲಾಡ್ಜ್‍ಗಳಲ್ಲಿ (99 ಪ್ರಕರಣಗಳು), ಧಾರ್ಮಿಕ ಕೇಂದ್ರಗಳಲ್ಲಿ (60 ಪ್ರಕರಣಗಳು), ಆಸ್ಪತ್ರೆಗಳಲ್ಲಿ (29 ಪ್ರಕರಣಗಳು) ಕಿರುಕುಳಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ವರದಿಯಾದ 4582 ಪೋಕ್ಸೊ ಪ್ರಕರಣಗಳಲ್ಲಿ ಒಟ್ಟು 4642 ಸಂತ್ರಸ್ಥರಿದ್ದಾರೆ.
ಈ ಪರಿಸ್ಥಿತಿಯಲ್ಲಿ, ಮಕ್ಕಳಿಗೆ ಪೋಸ್ಕೋ ಕಾನೂನುಗಳು ಮತ್ತು ಮಕ್ಕಳ ಸ್ನೇಹಿ ಕಾರ್ಯವಿಧಾನಗಳ ಬಗ್ಗೆ ಅರಿವು ನೀಡಬೇಕು ಎಂದು ವರದಿ ಬೊಟ್ಟುಮಾಡಿದೆ.
ವರದಿಯಾದ ಒಟ್ಟು ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ತಿರುವನಂತಪುರಂ (583), ಕಡಿಮೆ ಸಂಖ್ಯೆಯು ಪತ್ತನಂತಿಟ್ಟ (189) ನಿಂದ ವರದಿಯಾಗಿದೆ.
ಸಂತ್ರಸ್ಥ ಒಟ್ಟು 4,642 ಜನರಲ್ಲಿ 4008 ಹುಡುಗಿಯರು ಮತ್ತು 578 ಹುಡುಗರು ಎಂದು ವರದಿ ಹೇಳಿದೆ. ಹುಡುಗಿಯರು ಹೆಚ್ಚು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.
ಆರೋಪಿಗಳ ಪೈಕಿ ಶೇ.16 ಪ್ರೇಮಿಗಳು, ಶೇ.12 ನೆರೆಹೊರೆಯವರು, ಶೇ.9 ಕುಟುಂಬ ಸದಸ್ಯರು, ಶೇ.8 ಸಂಬಂಧಿಕರು, ಶೇ.3 ಶಿಕ್ಷಕರು. ಸಂತ್ರಸ್ಥರ ಪೈಕಿ ಹೆಚ್ಚಿನವರು 15-18 ವರ್ಷ ವಯಸ್ಸಿನವರಾಗಿದ್ದಾರೆ (2563 ಮಕ್ಕಳು). 0-4 ವರ್ಷ ವಯಸ್ಸಿನ 55 ಸಂತ್ರಸ್ಥರಿದ್ದಾರೆ.
ಮಕ್ಕಳ ಸಮಿತಿಯ ವರದಿಯು ಪೋಕ್ಸೊ ಪ್ರಕರಣಗಳಲ್ಲಿ 93 ಪ್ರತಿಶತದಷ್ಟು ಆರೋಪಿಗಳು ಪುರುಷರಾಗಿದ್ದರೆ, ಎರಡು ಪ್ರತಿಶತ ಮಹಿಳೆಯರು ಎಂದು ಗುರುತಿಸಿದೆ.