ಉತ್ತರಪ್ರದೇಶ: ಅಯೋಧ್ಯೆಯ ಗುಪ್ತರ್ ಘಾಟ್ ಬಳಿ ಕಮಲದ ಆಕಾರದ ಕಾರಂಜಿ ನಿರ್ಮಿಸುವ ಯೋಜನೆಯನ್ನು ಇದೀಗ ಯುಪಿ ಸರ್ಕಾರ ಮುನ್ನೆಲೆಗೆ ತಂದಿದ್ದು, ಸುಮಾರು 100 ಕೋಟಿ ರೂ. ವೆಚ್ಚದಲ್ಲಿ 25,000 ಜನರು ಒಮ್ಮೆ ನೋಡುವ ರೀತಿಯಲ್ಲಿ ವಿನ್ಯಾಸಗೊಳಿಸಲು ಚಿಂತನೆ ನಡೆಸಿದೆ.
ಕಾರಂಜಿಯು ಕಮಲದ ಹೂವಿನ ಆಕಾರದಲ್ಲಿರುತ್ತದೆ, ಆದರೆ ಅದರಿಂದ ಹರಿಯುವ ನೀರು ಸುಮಾರು 50 ಮೀಟರ್ ಎತ್ತರವನ್ನು ತಲುಪುತ್ತದೆ. ಆದಾಗ್ಯೂ, ಈ ಮಹತ್ವಾಕಾಂಕ್ಷೆಯ ಯೋಜನೆಯು ರಾಮಮಂದಿರ ಉದ್ಘಾಟನೆಯ ನಂತರ ಪೂರ್ಣಗೊಳ್ಳಲಿದೆ ಎಂದು ವರದಿ ತಿಳಿಸಿದೆ.
ಸದ್ಯ ಇದರ ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲಿದ್ದು, ಅಯೋಧ್ಯೆ ಆಡಳಿತವು ಯೋಜನೆಗಾಗಿ ಭೂಮಿಯನ್ನು ಗುರುತಿಸಿದೆ. ಆದರೆ ಪ್ರಮುಖ ಜಾಗತಿಕ ಏಜೆನ್ಸಿಗಳನ್ನು ಒಳಗೊಂಡ ಹರಾಜು ಪ್ರಕ್ರಿಯೆಯು ಇನ್ನೂ ಪ್ರಾರಂಭವಾಗಿಲ್ಲ.
ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಈ ಯೋಜನೆಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದು, 'ವಿಶಿಷ್ಟವಾದ ಕಾರಂಜಿ ಪ್ರಪಂಚದಾದ್ಯಂತ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸಲಿದೆ. ಇದು ದೇವಾಲಯದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ' ಎಂದು ಹೇಳಿದರು.